ಉಡುಪಿ: ಲೋಕಸಭಾ ಚುನಾವಣಾ ಸಮರ ರಾಜ್ಯದ ಜನರಲ್ಲಿ ಕುತೂಹಲ ಸೃಷ್ಟಿಸಿದೆ. ರಾಜಕೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಲ್ಲೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ನಾಯಕರು ಹರಸಾಹಸ ನಡೆಸುತ್ತಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಬಂಧ ಉಡುಪಿಯಲ್ಲಿ ನಾಯಕರ ಮಹತ್ವದ ಸಭೆ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕೆಪಿಸಿಸಿ ನಾಯಕರಾದ ಜಿ.ಎ. ಬಾವಾ ಸಹಿತ ನಾಯಕರನೇಕರು ಭಾಗವಹಿಸಿ ಕಾರ್ಯಕರ್ತರಲ್ಲೂ ಉತ್ಸಾಹ ತುಂಬಿದರು.
ಅಲ್ಪಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಬಾವಾ ಕಾರ್ಯತಂತ್ರ:
ಇದೇ ವೇಳೆ, ಕೆಪಿಸಿಸಿ ನಾಯಕ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಭಾವಾ ಅವರು ಅಲ್ಪಸಂಖ್ಯಾತ ಸಮುದಾಯಗಳ ನಾಯಕರ ಜೊತೆ ಸರಣಿ ಸಭೆ ನಡೆಸಿದರು. ಕಳೆದ ಕೆಲವು ದಿನಗಳಿಂದ ಕೆಪಿಸಿಸಿ ನಾಯಕ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಭಾವಾ ನೇತೃತ್ವದಲ್ಲಿ ಕಾರ್ಯಕರ್ತರ ಗುಂಪು ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ಭಾರೀ ಪ್ರಚಾರದಲ್ಲಿ ತೊಡಗಿದೆ. ಈ ಬಾರಿ ಅಲ್ಪಸಂಖ್ಯಾತರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಯಾಗುವ ನಿಟ್ಟಿನಲ್ಲಿ ಜಿ.ಎ.ಬಾವಾ ಅವರು ತಂತ್ರಗಾರಿಕೆ ಹೆಣೆದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಜಿ.ಎ.ಬಾವಾ ಅವರಿಗೆ ಆ ಪ್ರದೇಶದ ಜನರ ಮನಸ್ಥಿತಿ ಬಗ್ಗೆ ಅರಿವಿದೆ. ಜೊತೆಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಕ್ಕೆ ಜಿ.ಎ.ಬಾವಾ ಅವರು ತಮ್ಮದೇ ಆದ ಕೊಡುಗೆ ನೀಡಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮದೇ ಆದ ಹಿತೈಷಿಗಳ ಗುಂಪನ್ನು ಹೊಂದಿದ್ದಾರೆ. ಈ ಹಿತೈಷಿಗಳ ತಂಡದೊಂದಿಗೆ ಜಿ.ಎ.ಬಾವಾ ಅವರು ಮಂಗಳವಾರ ವಿವಿಧ ಊರುಗಳಿಗೆ ಭೇಟಿ ನೀಡಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದರೆ ಕಾಂಗ್ರೆಸ್ ಗೆಲುವು ಸಾಧ್ಯವಿದೆ ಎಂದು ಸಮುದಾಯದ ಮಂದಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎ.ಬಾವಾ, ಈ ಬಾರಿ ಕರಾವಳಿ ಜಿಲ್ಲೆಗಳಲ್ಲಿ ಜನರ ಮನಸ್ಥಿತಿ ಬದಲಾಗಿದೆ. ಈ ಹಿಂದಿನ ಅಹಿತಕರ ಸನ್ನಿವೇಶಗಳಿಂದ ಜನರು ಬೇಸತ್ತಿದ್ದು, ಈಗಿನ ಸಿದ್ದರಾಮಯ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ತೃಪ್ತಿ ಇದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಸಾಧ್ಯವಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಎಲ್ಲಾ ಸಮುದಾಯಗಳು ಮೆಚ್ಚುವಂಥವರು. ವಿವಿಧ ಪಕ್ಷಗಳ ಕಾರ್ಯಕರ್ತರೂ ಹೆಗ್ಡೆಯವರ ಗೆಲುವನ್ನು ಬಯಸಿದ್ದಾರೆ. ಈ ರೀತಿಯ ವಾತಾವರಣ ಕರಾವಳಿ ಜಿಲ್ಲೆಗಳಲ್ಲಿ ಇದೇ ಮೊದಲಬಾರಿಗೆ ವ್ಯಕ್ತವಾಗಿರುವುದರಿಂದ ಸಹಜವಾಗಿಯೇ ನಮ್ಮ ನಿರೀಕ್ಷೆ ಹೆಚ್ಚಾಗಿದೆ ಎಂದು ಜಿ.ಎ.ಬಾವಾ ವಿಶ್ಲೇಷಿಸಿದ್ದಾರೆ.