ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ KSRTCಗೆ ಮತ್ತಷ್ಟು ಪುರಸ್ಕಾರಗಳು ಹರಿದುಬಂದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಉತ್ಕೃಷ್ಟ ಸೇವೆಗಾಗಿ ಹಲವಾರು ಪ್ರಶಸ್ತಿಗಳು ಸಿಕ್ಕಿದ್ದು ಇದೀಗ ಮತ್ತೆ ಐದು ರಾಷ್ಟ್ರೀಯ ಹಾಗೂ ಒಂದು ಅಂತರರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.
ಈಗಾಗಲೇ, ಮಾನವ ಸಂಪನ್ಮೂಲ ವ್ಯವಸ್ಥೆಗೆ, ಐರಾವತ, ಡ್ರೀಮ್ ಪ್ಲಸ್ ಸಹಿತ ವಿವಿಧ ಸುಖಾಸೀನ ಬಸ್ಸುಗಳನ್ನು ಪರಿಚಯಿಸಿರುವ KSRTC ಇತರ ರಾಜ್ಯಗಳಿಗೂ ಮಾದರಿ ಎಂಬ ಗುಣಗಾನ ವ್ಯಕ್ತವಾಗಿದ್ದು ಅದರ ಜೊತೆಯಲ್ಲೇ, ನಿಗಮಕ್ಕೆ ಮಾನವ ಸಂಪನ್ಮೂಲ ಉಪ ಕ್ರಮಕ್ಕಾಗಿ ಪಂಜಾಬ್ ನಾಯಕತ್ವ ಪ್ರಶಸ್ತಿ ಸಿಕ್ಕಿದೆ. ಮಾರ್ಚ್ 15ರಂದು ಚಂದೀಗಡದಲ್ಲಿ ಈ ಪ್ರಶಸ್ತಿ ಸಿಕ್ಕಿದೆ.
ಅತ್ಯುತ್ತಮ ಗ್ರಾಹಕ ಸೇವಾ ಉಪಕ್ರಮಕ್ಕಾಗಿ ಉದ್ದಿಮೆಯ ಸ್ಟಾರ್ ಆಪ್ ಎಕ್ಸಲೆನ್ಸ್ ಪ್ರಶಸ್ತಿಸಿಕ್ಕಿದ್ದು ಮಾರ್ಚ್21ರಂದು ನವದೆಹಲಿಯಲ್ಲಿ ಪ್ರಶಸ್ತಿ ಪ್ರಧಾನವಾಗಲಿದೆ.
ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ಸತತ ವಿನೂತನ ಉಪಕ್ರಮಗಳಿಗಾಗಿ ರಾಷ್ಟ್ರೀಯ ಅತ್ಯುತ್ತಮ ಉದ್ಯೋಗ ಬ್ರ್ಯಾಂಡ್ ಪ್ರಶಸ್ತಿ ಮಾರ್ಚ್21ರಂದು ನವದೆಹಲಿಯಲ್ಲಿ ಪ್ರದಾನ ಮಾಡಲಾಗುತ್ತದೆ.
ಮಾನವ ಸಂಪನ್ಮೂಲ ಉಪಕ್ರಮ ಸಾಧನೆಗಾಗಿ ಗೌರ್ವನೆನ್ಸ್ ನೌ 10ನೇ ಸಾರ್ವಜನಿಕ ಉದ್ದಿಮೆಗಳ ಪ್ರಶಸ್ತಿಯನ್ನು ಮಾರ್ಚ್22ರಂದು ನವದೆಹಲಿಯಲ್ಲಿ ನೀಡಲಾಗುತ್ತದೆ.
ಈಶಾನ್ಯ ಭಾರತ ನಾಯಕತ್ವ ಪ್ರಶಸ್ತಿಯು ನಿಗಮಕ್ಕೆ ಅತ್ಯುತ್ತಮ ವಿನೂತನ ವಾಹನ ಸಮೂಹ ನಿರ್ವಹಣೆಗಾಗಿ ಅಸ್ಸಾಂ ರಾಜ್ಯದ ಗುವಾಹತಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಇದೇ ವೇಳೆ, ದಕ್ಷಿಣ ಆಫ್ರಿಕಾ ನಾಯಕತ್ವ ಪ್ರಶಸ್ತಿಯು ಸಿಕ್ಕಿದ್ದು, ಅತ್ಯುತ್ತಮ ಉಪಕ್ರಮ ವರ್ಗದಡಿ ಬಸ್ ಬ್ರಾಂಡ್ ನಿರ್ವಹಣೆಗಾಗಿ ಈ ಪುರಸ್ಕಾರ ಲಭಿಸಿರುತ್ತದೆ ಎಂದು ನಿಗಮದ ಮೂಲಗಳು ತಿಳಿಸಿವೆ.