ಚೆನ್ನೈ: ತಮಿಳುನಾಡಿನ ಕರೂರ್ ಜಿಲ್ಲೆಯ ಕುಳಿತಲೈ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ಕಾರು ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ (TNSTC) ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಕರೂರ್-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ತಂಜಾವೂರು ಜಿಲ್ಲೆಯ ಒರಥನಾಡು ಬಳಿಯ ಒಕ್ಕನಾಡು ಕೀಲಾಯೂರ್‌ನಲ್ಲಿರುವ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಕಾರು ಪುದುಕ್ಕೊಟ್ಟೈ ಜಿಲ್ಲೆಯ ಅರಂತಂಗಿಯಿಂದ ತಿರುಚ್ಚಿ ಮೂಲಕ ತಿರುಪ್ಪೂರಿಗೆ ಹೋಗುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ.
ಮೃತರನ್ನು ಕೊಯಮತ್ತೂರಿನ ಸುಗುಣಪುರಂ ಪೂರ್ವದ ಗಾಂಧಿ ನಗರದ ನಿವಾಸಿ ಎಸ್. ಸೆಲ್ವರಾಜ್ (50), ಅವರ ಪತ್ನಿ ಎಸ್. ಕಲಯರಸಿ (45), ಅವರ ಮಗಳು ಎಸ್. ಅಕಲ್ಯ (25), ಮಗ ಎಸ್. ಅರುಣ್ (22) ಮತ್ತು ಈರೋಡ್ ಜಿಲ್ಲೆಯ ವಿಲ್ಲರಸನ್‌ಪಟ್ಟಿ ನಿವಾಸಿ ಕಾರು ಚಾಲಕ ವಿಷ್ಣು (24) ಎಂದು ಗುರುತಿಸಲಾಗಿದೆ.