ಬೆಳಗಾವಿ: ಪದೇ ಪದೇ ಉಂಟಾಗುವ ಪ್ರವಾಹದಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದು,ಶಾಶ್ವತ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ” ಬೆಳೆನೀತಿಯನ್ನು ” ಜಾರಿಗೆ ತರಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಅವರು ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ನಿಯಮ 69 ರ ಅಡಿ, ಪ್ರವಾಹದಿಂದ ಉಂಟಾಗಿರುವ ನಷ್ಟದ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಬೆಳೆ ನೀತಿ ಜಾರಿ ಮಾಡಿದರೆ, ರೈತರಿಗೆ ಹೆಚ್ಚಿನ ಅನುಕೂಲ ಸಿಗಲಿದೆ ಎಂದು ಅಭಿಪ್ರಾಯಪಟ್ಟರು. ಬೆಳೆ ನೀತಿ ಜಾರಿಯಾದರೆ, ಸರರ್ಕಾರ ಬೆಲೆ ನೀತಿಯನ್ನು ವೈಜ್ಞಾನಿಕವಾಗಿ ನಿಗದಿಪಡಿಸಲು ಸಹಾಯಕವಾಗಲಿದೆ. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ಮಾಡಲಿ ಎಂದು ಸಲಹೆ ಮಾಡಿದರು.
ಪರಿಹಾರ ನೀಡುವುದರಿಂದ ರೈತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ಪ್ರತಿ ವರ್ಷ ಇದು ಪುನಾರವರ್ತನೆಯಾದರೆ ಯಾವ ಸರಕಾರಗಳು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಉತ್ಪಾದನೆಗೆ ತಕ್ಕಂತೆ ಬೇಡಿಕೆ, ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕರೆ ಅನ್ನದಾತನು ನೆಮ್ಮದಿಯಿಂದ ಇರುತ್ತಾನೆ ಎಂದರು. ದಲ್ಲಾಳಿಗಳಿಗೆ ಕಡಿವಾಣ ಹಾಕುವುದು ಇಂದಿನ ತುರ್ತು ಅಗತ್ಯವಿದೆ. ರೈತರನ್ನು ನಿಜವಾಗಿಯೂ ಶೋಷಣೆ ಮಾಡುತ್ತಿರುವವರು ಇವರೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾರುಕಟ್ಟೆ ವಿಸ್ತರಣೆಯಾಗಬೇಕಾದರೆ, ಇದನ್ನು ಪರಿಷ್ಕರಣೆ ಮಾಡಬೇಕು. ಆಗ ಮಾತ್ರ ರೈತರಿಗೆ ಉಂಟಾಗುವ ವಂಚನೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಇಂದು ರೈತರ ಬದುಕು “ಗಾಳಿಗೆ ಒಡ್ಡಿದ ದೀಪದಂತಿದೆ. ಗಾಳಿ ಇಲ್ಲದಿದ್ದರೂ ದೀಪ ಆರಿಹೋಗುವ ಸ್ಥಿತಿಯಲ್ಲಿದೆ” ಎಂದು ಆತಂಕ ವ್ಯಕ್ತಪಡಿಸಿದರು. ರೈತರು ಕಡ್ಡಾಯವಾಗಿ ತಮ್ಮ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬೇಕು. ಹಂತ ಹಂತವಾಗಿ ಕಂತುಗಳನ್ನು ಕಟ್ಟಿದರೆ, ಸಕಾಲಕ್ಕೆ ಸರಿಯಾಗಿ ಪರಿಹಾರ ಸಿಗಲಿದೆ. ಸರಕಾರವು ರೈತರ ಸಾಲಮನ್ನಾ ಮಾಡುವ ಪ್ರಮೇಯವೇ ಬರುವುದಿಲ್ಲ ಎಂದರು.
ಚಿಕ್ಕಮಗಳೂರು, ಮಡಿಕೇರಿ ಸೇರಿದಂತೆ ಮತ್ತಿತರ ಕಡೆ ಪ್ರಮುಖ ವಾಣಿಜ್ಯ ಬೆಳೆಯಾದ ಕಾಫಿ ಪ್ರವಾಹದಿಂದ ಕೊಚ್ಚಿ ಹೋಗಿ ರೈತರು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ರಾಜ್ಯ ಸರ್ಕಾರ ಇದನ್ನು” ಫಸಲ್ ಭೀಮ ವ್ಯಾಪ್ತಿಗೆ” ಸೇರಿಸುವಂತೆ ರವಿ ಅವರು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫಸಲ್ ಭೀಮ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಮೊದಲು ರೈತರಿಗೆ ಪರಿಹಾರ ನೀಡಬೇಕು ಎಂದರೆ, ಕಚೇರಿಯಿಂದ ಕಚೇರಿಗೆ ಕಡತಗಳು ಅಲೆಯಬೇಕಿತ್ತು. ರೈತರಿಗೆ ಪರಿಹಾರವು ಮಧ್ಯವರ್ತಿಗಳ ಕೈ ಸೇರುತ್ತಿತ್ತು. ಈಗ ಮೋದಿ ಅವರ ಸರಕಾರವು ಪರಿಹಾರವನ್ನು ಫಲಾನುಭವಿಗಳ ನೇರ ಖಾತೆಗೆ ಹಾಕುವ ಯೋಜನೆಯನ್ನು ಜಾರಿ ಮಾಡಿದೆ.ಪರಿಣಾಮವಾಗಿ ಮಧ್ಯವರ್ತಿಗಳ ಹಾವಳಿಯು ತಪ್ಪಿದೆ ಎಂದರು.
ಹಿಂದಿನ ಸರಕಾರಗಳು ನೆರೆ ಉಂಟಾದಾಗ ಪ್ರತಿ ಹೆಕ್ಟೇರ್ ಗೆ ಕೇವಲ 800 ರೂಪಾಯಿ ಹಾಗೂ 2000 ಸಾವಿರ ನೀಡುತ್ತಿತ್ತು. ಈಗ ಮೋದಿ ಸರಕಾರ 6500 ಹೆಕ್ಟೇರ್ ಗೆ ನೀಡುತ್ತಿದೆ. ಆದರೂ ಕೆಲವರು ಟೀಕಿಸುವ ಪ್ರವೃತ್ತಿಯನ್ನು ನಿಲ್ಲಿಸಿಲ್ಲ ಎಂದು ವಿರೋಧ ಪಕ್ಷದವರ ಮೇಲೆ ಚಾಟಿ
ಬೀಸಿದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಪ್ರಕೃತಿ ವಿಕೋಪ ಉಂಟಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತದೆ. ಆದರೂ ಎಲ್ಲವನ್ನೂ ಮೆಟ್ಟಿ ರೈತರಿಗೆ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಸರ್ಕಾರದ ಕ್ರಮವನ್ನು ರವಿ ಅವರು ಬಲವಾಗಿ ಸಮರ್ಥಿಸಿಕೊಂಡರು.