ನವದೆಹಲಿ: ರೈತರ ಸಮಸ್ಯೆಗಳು ಭಾಷಣಗಳಲ್ಲಿ ಮಾತ್ರ ಪರಿಹಾರ ಕಂಡುಕೊಳ್ಳುತ್ತಿವೆ. ಹೊಲಗಳಲ್ಲಿ ಇನ್ನೂ ಆತ್ಮಹತ್ಯೆಗಳ ಕಣ್ಣೀರು ಒಣಗಿಲ್ಲ. ಪುಣೆ ಮೂಲದ ಉದ್ಯಮಿ ಪ್ರಫುಲ್ ಸರ್ದಾ ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿ (ಆರ್‌ಟಿಐ) ಬಯಲಿಗೆಳೆದ ಅಂಕಿಅಂಶಗಳು ಈ ತೀವ್ರ ವಾಸ್ತವವನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.
2004ರಿಂದ 2014ರವರೆಗೆ ಯುಪಿಎ ಆಳ್ವಿಕೆಯಲ್ಲಿ 1,70,505 ರೈತರು ಆತ್ಮಹತ್ಯೆ ಮಾಡಿಕೊಂಡರೆ, 2015ರಿಂದ 2022ರವರೆಗೆ ಎನ್‌ಡಿಎ ಅವಧಿಯಲ್ಲಿ 88,117 ಆತ್ಮಹತ್ಯೆಗಳು ದಾಖಲಾಗಿವೆ. ಅಂದರೆ ಶೇಕಡಾ 50ರಷ್ಟು ಇಳಿಕೆ ಕಂಡರೂ, ಒಟ್ಟು 2.58 ಲಕ್ಷ ರೈತರ ಪ್ರಾಣ ಬಲಿ ಯಾವುದೇ ಅಂಕಿಅಂಶಕ್ಕಿಂತ ದೊಡ್ಡ ಶೋಕಗಾಥೆಯಾಗಿದೆ.
ಮಹಾರಾಷ್ಟ್ರ ಈ ಬಿಕ್ಕಟ್ಟಿನ ಕೇಂದ್ರಬಿಂದು. ಯುಪಿಎ ಅವಧಿಯಲ್ಲಿ 40,852, ಎನ್‌ಡಿಎ ಅವಧಿಯಲ್ಲಿ 31,492 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶಗಳಲ್ಲಿ ಸಹ ಹತ್ತು ಸಾವಿರಾರು ಪ್ರಕರಣಗಳು ದಾಖಲಾಗಿವೆ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಶೂನ್ಯ ಆತ್ಮಹತ್ಯೆಗಳ ವರದಿ ತಲೆಕೆಡಿಸುವ ಪ್ರಶ್ನೆಗಳನ್ನು ಎಬ್ಬಿಸಿದೆ.
“2.58 ಲಕ್ಷ ರೈತರ ಸಾವು ನಮ್ಮ ವ್ಯವಸ್ಥೆಯ ನೈಜ ವೈಫಲ್ಯವನ್ನು ತೋರಿಸುತ್ತವೆ. ಸಾಲ, ಮಾರುಕಟ್ಟೆ, ಹವಾಮಾನ, ಬೆಳೆ ವೈಫಲ್ಯಗಳಿಂದ ರೈತ ಇನ್ನೂ ನರಳುತ್ತಿದ್ದಾನೆ” ಎಂದು ಪ್ರಫುಲ್ ಸರ್ದಾ ಹೇಳುತ್ತಾರೆ.
ಪಿಎಂ-ಕಿಸಾನ್, ಫಸಲ್ ಬಿಮಾ, ಮಣ್ಣಿನ ಆರೋಗ್ಯ ಕಾರ್ಡ್‌ಗಳು, ಇ-ಮಾರುಕಟ್ಟೆ ಯೋಜನೆಗಳ ಪಟ್ಟಿಯನ್ನು ಸರ್ಕಾರ ನೀಡಿದರೂ, ವಾಸ್ತವ ಭಿನ್ನವಾಗಿದೆ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿವೆ. .