ರಾಮನಗರ: ಅಬಕಾರಿ ಇಲಾಖೆಯ ಹಗರಣದ ಬಗ್ಗೆ ದೂರು ಸಲ್ಲಿಕೆಯಾಗಿ ಜನರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಆದರೂ ಲೂಟಿ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರು ಯಾವ ನಾಲಿಗೆಯಿಂದ ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆಯ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಅದು ಸುಳ್ಳು ಆರೋಪವೆಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇದರ ವಿರುದ್ಧ ದೂರು ದಾಖಲಾಗುವುದರ ಜೊತೆಗೆ, ಮದ್ಯ ಮಾರಾಟಗಾರರ ಸಂಘದವರು ಕೂಡ ಇದನ್ನು ಹೇಳಿದ್ದಾರೆ. ಮಾಧ್ಯಮಗಳಲ್ಲಿ ಕೂಡ ಇದು ವರದಿಯಾಗಿದೆ. ಜನರು ಕೂಡ ಈ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟಾದರೂ ನಾವು ಲೂಟಿ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರು ಯಾವ ನಾಲಿಗೆಯಿಂದ ಹೇಳುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ, ಸರ್ಕಾರಿ ಹಣದಲ್ಲಿ ಜಾಹೀರಾತು ನೀಡಲಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಕೊಳ್ಳೆ ಹೊಡೆದಿರುವುದು ಸಾಬೀತಾಗಿದೆ. ಇದನ್ನು ಸ್ವತಃ ಸಿಎಂ ಒಪ್ಪಿಕೊಂಡಿದ್ದಾರೆ. ಶಾಲಾ ಮಕ್ಕಳಿಗೆ ಅಜೀಂ ಪ್ರೇಮ್ ಜಿ ಕಂಪನಿ ಮೊಟ್ಟೆ ಕೊಟ್ಟರೆ, ಅದನ್ನು ಸರ್ಕಾರ ಮಕ್ಕಳಿಗೆ ತಲುಪಿಸಿಲ್ಲ. ಈ ಸರ್ಕಾರದ ಯೋಗ್ಯತೆಯೇ ಇಷ್ಟು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯಿಂದ ಪ್ರಗತಿ ಪರಿಶೀಲನೆ:
ವಕ್ಫ್ ಬಳಿ 1.12 ಲಕ್ಷ ಎಕರೆ ಇದೆ ಎಂದು ಹೇಳಿದ್ದಾರೆ. ಇಷ್ಟು ಭೂಮಿ ಅವರ ಬಳಿ ಇದ್ದರೆ, ರಾಜ್ಯದಲ್ಲಿ ಯಾರಿಗೂ ಜಮೀನು ಇರುವುದಿಲ್ಲ. ಮುಸ್ಲಿಂ ಮುಖಂಡರೇ ವಕ್ಫ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಡಪ್ರಭು ಕೆಂಪೇಗೌಡರು ಅಕ್ಕಿಪೇಟೆ, ಬಳೆಪೇಟೆ ಮೊದಲಾದ ಪೇಟೆಗಳನ್ನು ನಿರ್ಮಿಸಿದ್ದರು. ಈ ಪೇಟೆಗಳು ಕೂಡ ತಮ್ಮದೇ ಎಂದು ವಕ್ಫ್ ಹೇಳುತ್ತಿದೆ. ಒಂದು ಕಡೆ ಸಿಎಂ ನೋಟಿಸ್ ಕೊಡಬೇಡಿ ಎನ್ನುತ್ತಾರೆ. ಇನ್ನೊಂದು ಕಡೆ ಭೂಮಿ ಕಬಳಿಕೆಗೆ ಪ್ರಗತಿ ಪರಿಶೀಲನಾ ಸಭೆ ಮಾಡುತ್ತಾರೆ ಎಂದು ಹೇಳಿದರು.
ರೈತರ ಪರ ಮಾತನಾಡಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಿದೆ. ಜೊತೆಗೆ ಕೋವಿಡ್ ಹಗರಣವೆಂದು ಸುಳ್ಳು ಆರೋಪ ಮಾಡಿ ವರದಿ ಸೃಷ್ಟಿಸಿ ಅದನ್ನು ಸೋರಿಕೆ ಮಾಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧವೂ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗಿದೆ. ಇನ್ನೂ ಪೂರ್ಣ ವರದಿ ಬಾರದೆ, ಚುನಾವಣೆಯ ಸಮಯದಲ್ಲಿ ಈ ಸುಳ್ಳು ಸೃಷ್ಟಿಸಲಾಗಿದೆ. ಕೆಂಪಣ್ಣ ಆಯೋಗ ರಚನೆಯಾಗಿ ಹತ್ತು ವರ್ಷ ಕಳೆದರೂ ಅರ್ಧ ವರದಿಯೂ ಬಂದಿಲ್ಲ. ಯಡಿಯೂರಪ್ಪ ಅವರನ್ನು ಅಪರಾಧಿ ಎಂದು ಬಿಂಬಿಸಲು ಹುನ್ನಾರ ಮಾಡಲಾಗಿದೆ. ಇವೆಲ್ಲ ದ್ವೇಷದ ರಾಜಕಾರಣ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ನಡೆಯುತ್ತಿಲ್ಲ. ಮೂರು, ನಾಲ್ಕು ತಿಂಗಳಿಗೆ ಒಮ್ಮೆ ಗ್ಯಾರಂಟಿ ಹಣ ಜನರಿಗೆ ದೊರೆಯುತ್ತಿದೆ. ಆದರೂ ಇಲ್ಲಿಗೆ ಬಂದು ನೋಡಿ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಮೊದಲು ಇಲ್ಲಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಲಿ ಎಂದರು.
ನಿಖಿಲ್ ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲದಿಂದ ಸ್ಪರ್ಧಿಸುತ್ತಿದ್ದಾರೆ. ಈಗಿನ ಸಮಯದಲ್ಲಿ ನಿಖಿಲ್ ಅವರೇ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ ಎಂಬ ಮಾಹಿತಿ ಬಂದಿದೆ. ಅವರು ಗೆಲ್ಲುವುದು ಖಂಡಿತ ಎಂದರು.