ಗ್ಯಾರೆಂಟಿ ಹೆಸರಲ್ಲಿ ಪುಕ್ಕಟೆ ಪ್ರಚಾರ.. ಮತ್ತೊಂದೆಡೆ ನಿಗೂಢವಾಗಿ ಅಕ್ರಮ ವಸೂಲಿ.. ಎಸ್ಕಾಂಗಳಿಂದ ASD ಹೆಸರಲ್ಲಿ ವಸೂಲಿ.. ಗ್ರಾಹಕರಿಗೆ ಅಕ್ರಮವಾಗಿ ನೋಟಿಸ್, ನೋಟಿಸ್’ಗೆ ಸೀಲ್ ಇಲ್ಲ, ಸಹಿಯೂ ಇಲ್ಲ.. ಸಿದ್ದು, ಜಾರ್ಜ್ ಆಡಳಿತ ವೈಖರಿ ವಿರುದ್ಧ ಜನಾಕ್ರೋಶ
ಬೆಂಗಳೂರು: ಗ್ಯಾರೆಂಟಿ ಯೋಜನೆ ಹೆಸರಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿರುವ ಸಿದ್ದರಾಮಯ್ಯ ಸರ್ಕಾರ ಇದೀಗ ರಾಜ್ಯದ ಜನರ ಶೋಷಣೆಗೆ ಇಳಿದಿರುವುದು ದುರಾದೃಷ್ಟಕರ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪೆಟ್ರೋಲ್ ಡೀಸೆಲ್ ದರ ಏರಿಕೆ ಮಾಡಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ವಿದ್ಯುತ್ ಇಲಾಖೆಯ ಮೂಲಕವೂ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಿಸುವ ಪ್ರಯತ್ನಕ್ಕಿಳಿದಿವೆ. ಅದಕ್ಕೆ ಸಾಕ್ಷಿ ಎಂಬಂತಿದೆ ಹೆಚ್ಚುವರಿ ಭದ್ರತಾ ಠೇವಣಿ (ASD) ವಸೂಲಿ.
ಜೂನ್ ತಿಂಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯುತ್ ಬಿಲ್ ಮತ್ತು ASD ಬರುತ್ತಿದೆ ಎಂದು ಸಾರ್ವಜನಿಕರು ಆಘಾತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಬೆಸ್ಕಾಂ, ವಿದ್ಯುತ್ ಬಳಕೆ ಹೆಚ್ಚಾಗಿರುವುದರಿಂದ ಬಿಲ್ ಹೆಚ್ಚು ಬರುತ್ತಿದೆ ಎಂದು ಹೇಳುತ್ತಿದೆ.
ವಿದ್ಯುತ್ ಬಳಕೆದಾರರು ನಿರ್ದಿಷ್ಟ ಮೊತ್ತವನ್ನು ವಿದ್ಯುತ್ ಕಂಪೆನಿಗಳಲ್ಲಿ ಠೇವಣಿ ಇಡಬೇಕಿದೆ. ಈಗಾಗಲೇ ಠೇವಣಿ ಇಟ್ಟಿದ್ದರೂ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸಬೇಕು ಎಂಬುದು ವಿದ್ಯುತ್ ಕಂಪನಿಗಳ ಷರತ್ತು.
ರಾಜ್ಯದಲ್ಲಿರುವ ವಿದ್ಯುತ್ ಕಂಪನಿಗಳು ಸರ್ಕಾರಿ ಒಡೆತನದ್ದಾಗಿದ್ದು ಸರ್ಕಾರದ ಅನುದಾನವನ್ನೂ ಅವಲಂಭಿಸಿವೆ. ಆದಾಗಿಯೂ ಗ್ರಾಹಕರಿಂದ ಠೇವಣಿ ಕೇಳುವುದು ಎಷ್ಟು ಸರಿ? ಎಂಬುದು ಸಾರ್ವಜನಿಕರ ಪ್ರಶ್ನೆ.
ಗ್ರಾಹಕರು ಬಿಲ್ ಪಾವತಿಸದ ಸಂದರ್ಭದಲ್ಲಿ ಹಣ ಹೊಂದಾಣಿಕೆ ಮಾಡುವ ಉದ್ದೇಶದಿಂದ ಭದ್ರತಾ ಠೇವಣಿ ಪಡೆಯುವುದು ಸಾಮಾನ್ಯ. ಆದರೆ ಸರ್ಕಾರಿ ಸಂಸ್ಥೆಗೆ ಈ ರೀತಿಯ ವ್ಯವಸ್ಥೆಯೇ ಬೇಕಿಲ್ಲ. ಯಾಕೆಂದರೆ ಜನರ ತೆರಿಗೆ ಹಣದಿಂದಲೇ ವಿದ್ಯುತ್ ಕಂಪನಿಗಳು ಸ್ಥಾಪಿತವಾಗಿರುವುದು. ಅಷ್ಟೇ ಅಲ್ಲ,ಒಂದು ವೇಳೆ ವಿದ್ಯುತ್ ಬಿಲ್ ಕಟ್ಟದೇ ಇದ್ದಾರೆ, ಅದರ ವಸೂಲಿಗಾಗಿ ಜಾಗೃತ ದಳವೂ ಇರುವುದರಿಂದ ವಸೂಲಾತಿ ಕಷ್ಟವಿಲ್ಲ. ಹೀಗಿರುವಾಗ ASD ಏಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಸಚಿವ ಕೆ.ಜೆ.ಜಾರ್ಜ್ ಅವರ ಇಲಾಖೆಯಡಿ ಬರುವ ವಿದ್ಯುತ್ ಕಂಪನಿಗಳು ಸಾರ್ವಜನಿಕರನ್ನು ಎಷ್ಟು ಮೂರ್ಖರನ್ನಾಗಿಸುತ್ತಿವೆ ಎಂದರೆ, ಈ ASD ಕಟ್ಟುವಂತೆ ಜನರಿಗೆ ನೋಟಿಸ್ ನೀಡುತ್ತಿದ್ದು ಆ ನೋಟಿಸ್’ನಲ್ಲಿ ಅಧಿಕಾರಿಗಳ ಸಹಿಯಾಗಲೀ, ಕಂಪನಿಯ ಮುದ್ರೆಯಾಗಲೀ ಇಲ್ಲ. ಸಹಿ ಮಾಡಲು ಪೆನ್ನು ಖರೀದಿಸುವಷ್ಟೂ ಹಣ ವಿದ್ಯುತ್ ಇಲಾಖೆಯಲ್ಲಿ ಇಲ್ಲವೇ? ಕನಿಷ್ಠ ಪಕ್ಷ ಸಹಿ ಹಾಕುವ ತಾಳ್ಮೆ ಅಧಿಕಾರಿಗಳಿಗೆ ಇಲ್ಲವೇ? ಅಥವಾ ಜಾರ್ಜ್ ಅವರ ಇಲಾಖೆ ಇಷ್ಟೊಂದು ಬಡವಾಗಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಈ ನಡುವೆ ASD ಆನ್ ಲೈನ್ ಪಾವತಿಗೆ ಅವಕಾಶ ಇಲ್ಲ ಎಂಬ ಉತ್ತರ ವಿದ್ಯುತ್ ಕಂಪೆನಿ ಅಧಿಕಾರಿಗಳದ್ದು. ಇದೂ ಕೂಡ ಗ್ರಾಹಕರ ತಾಳ್ಮೆ ಪರೀಕ್ಷಿಸುವಂತಾಗಿದೆ. ಗ್ರಾಹಕರು ಹತ್ತಿರದ ವಿದ್ಯುತ್ ಸರಬರಾಜು ಕಂಪನಿಯ ಕಚೇರಿಗೆ ತೆರಳಿ ನಗದು ರೂಪದಲ್ಲೇ ಏಳು ದಿನಗಳ ಒಳಗೆ ಹಣ ಪಾವತಿಸಬೇಕೆಂದೂ, ಇಲ್ಲವಾದರೆ ವಿದ್ಯುತ್ ಸಂಪರ್ಕ ಕಡಿತ ಮಾಡಬೇಕೆಂದು ವಿದ್ಯುತ್ ಕಂಪನಿ ಬೆದರಿಕೆ ಒಡ್ಡಿರುವುದು ಈ ಸರ್ಕಾರದ ಆಡಳಿತ ವೈಖರಿ ಹೇಗಿದೆ ಎಂಬುದನ್ನು ತೋರಿಸುವಂತಿದೆ ಎಂದು ಜನಸಾಮಾನ್ಯರು ಹೇಳುತ್ತಿದ್ದಾರೆ.