ನವದೆಹಲಿ: ಲೋಕಸಭೆಯಲ್ಲಿ ಸೋಮವಾರ ‘ಹಿಂದೂ’ ವಿಚಾರ ಕುರಿತಂತೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣ ಬಿಜೆಪಿ ನಾಯಕರನ್ನು ಕೆರಳಿಸಿದೆ.
ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರ, ಬಿಜೆಪಿ, ಆರೆಸ್ಸೆಸ್ ಬಗ್ಗೆ ವಾಗ್ದಾಳಿ ನಡೆಸಿದರು. ಪ್ರತಿಪಕ್ಷ ನಾಯಕರಾಗಿ ತಮ್ಮ ಮೊದಲ ಭಾಷಣದಲ್ಲಿ ರಾಹುಲ್ ಗಾಂಧಿ ಅವರು, :ತಮ್ಮನ್ನು ತಾವು ಹಿಂದೂಗಳು ಎಂದು ಹೇಳಿಕೊಳ್ಳುವವರು ಹಿಂಸಾಚಾರದಲ್ಲಿ ತೊಡಗಿದ್ದಾರೆ’ ಎಂದು ಕುಟುಕಿದರು.
ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ಸಹಿತ ಎನ್‌ಡಿಎ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಹುಲ್ ಮಾತನ್ನು ಬಲವಾಗಿ ವಿರೋಧಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ತಮ್ಮನ್ನು ಹಿಂದೂಗಳೆಂದು ಗುರುತಿಸಿಕೊಳ್ಳುವುದರಲ್ಲಿ ಹೆಮ್ಮೆ ಪಡುವ ಕೋಟ್ಯಂತರ ಜನರ ಭಾವನೆಗಳಿಗೆ ರಾಹುಲ್ ಅವರಿಂದ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು. ರಾಹುಲ್ ಗಾಂಧಿ ಅವರು ಸದನ ಮತ್ತು ದೇಶದ ಕ್ಷಮೆ ಯಾಚಿಸಬೇಕು’ ಎಂದು ಅಮಿತ್ ಶಾ ಪಟ್ಟು ಹಿಡಿದರು.
‘ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ ಮಾಡುತ್ತಾರೆ’ ಎಂದು ವಿರೋಧ ಪಕ್ಷದ ನಾಯಕ ಹೇಳಿದ್ದಾರೆ.
ಈ ದೇಶದ ಕೋಟ್ಯಂತರ ಜನರು ತಮ್ಮನ್ನು ತಾವು ಹಿಂದೂ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ, ಅವರೆಲ್ಲರೂ ಹಿಂಸೆ ಮಾಡುತ್ತಾರೆಯೇ?
ಹಿಂಸೆಯ ಮನೋಭಾವವನ್ನು ಯಾವುದೇ ಧರ್ಮದೊಂದಿಗೆ ಜೋಡಿಸುವುದು ತಪ್ಪು. ಇದಕ್ಕಾಗಿ ರಾಹುಲ್ ಗಾಂಧಿ… pic.twitter.com/WPx89qRntm
— BJP Karnataka (@BJP4Karnataka) July 1, 2024
ತುರ್ತು ಪರಿಸ್ಥಿತಿ ಮತ್ತು 1984ರ ಸಿಖ್ ನರಮೇಧ ಬಗ್ಗೆ ಪ್ರಸ್ತಾಪಿಸಿದ ಅಮಿತ್ ಶಾ, ‘ಕಾಂಗ್ರೆಸ್ ಈ ದೇಶದಲ್ಲಿ ಉಗ್ರವಾದ ಹರಡಿದೆ. ಹಾಗಾಗಿ ಅಹಿಂಸೆಯ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದು ರಾಹುಲ್ ಮಾತಿಗೆ ಎದಿರೇಟು ನೀಡಿದರು.