ಕೆಐಎಡಿಬಿ ಕರ್ಮಕಾಂಡ; ಬಾಳಪ್ಪ ಹಂದಿಗುಂದ ವಿರುದ್ಧ ತನಿಖೆಗೆ ನಿರ್ದೇಶನ ಕೋರಿ ರಾಜ್ಯಪಾಲರಿಗೆ ದೂರು.. ಸಿದ್ದು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ದೂರು.. ಹಂದಿಗುಂದ ಎತ್ತಂಗಡಿಗೆ ಆಗ್ರಹ..
ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ‘ಪೇ ಸಿಎಂ ಸೇ ಸಿಎಂ’ ಘೋಷಣೆ ಮೂಲಕ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಮೆಗಾ ಅಭಿಯಾನ ಕೈಗೊಂಡು ಆಡಳಿತಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ‘ಹಂದಿಗುಂದ ಪ್ರಕರಣ’ ಸವಾಲಾಗಿ ಪರಿಣಮಿಸಿದೆ. ಭ್ರಷ್ಟಾಚಾರ ವಿರುದ್ಧ ದೇಶವ್ಯಾಪಿ ಕಾನೂನು ಹೋರಾಟ ನಡೆಸುತ್ತಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಕೆಎಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ದದ ಭ್ರಷ್ಟಾಚಾರ ಆರೋಪದಲ್ಲಿ ಸಿದ್ದರಾಮಯ್ಯ ಸರ್ಕಾರದ ಲೋಪವನ್ನೇ ಎತ್ತಿ ಹಿಡಿದಿದೆ. ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿ KIADB ಕರ್ಮಕಾಂಡದ ತನಿಖೆಗೆ ರೋಚಕತೆ ತುಂಬಿದೆ.
ಕೆಐಎಡಿಬಿಯಲ್ಲಿ ಪ್ರಸ್ತುತ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿರುವ KAS ಅಧಿಕಾರಿ ಬಾಲಪ್ಪ ಹಂದಿಗುಂದ ವಿರುದ್ಧ ಬೆಂಗಳೂರಿನ ದೇವನಹಳ್ಳಿ ಸುತ್ತಮುತ್ತ ಅಕ್ರಮವಾಗಿ ಭೂಸ್ವಾಧೀನ ಮಾಡಿರುವ ಹಾಗೂ ಪರಿಹಾರ ಹಂಚಿಕೆಯಲ್ಲಿನ ಅಕ್ರಮಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಈ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಉನ್ನತಮಟ್ಟದ ತನಿಖೆಗೆ ಕೋರಿ ಸಿಟಿಜನ್ ರೈಟ್ಸ್ ಫೌಂಡೇಶನ್ (Citizen Rights Foundation) ಅಧ್ಯಕ್ಷ ಕೆ.ಎ.ಪಾಲ್ (K.A. Paul) ಅವರು ಮುಖ್ಯಮಂತ್ರಿಗೆ ಸೆಪ್ಟೆಂಬರ್ 12ರಂದು ದೂರು ಸಲ್ಲಿಸಿದ್ದರು. ಅಷ್ಟೇ ಅಲ್ಲ, ಈ ಭ್ರಷ್ಟಾಚಾರ ಆರೋಪ ಬಗ್ಗೆ ತನಿಖೆಗೆ ಕೋರಿ ಅಕ್ಟೊಬರ್ 10ರಂದು ಲೋಕಾಯುಕ್ತರಿಗೂ ದೂರು ಸಲ್ಲಿಸಿದ್ದರು.
ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದಿದ್ದಾಗ ಜಾರಿ ನಿರ್ದೇಶನಾಲಯಕ್ಕೆ ಕೆ.ಎ.ಪಾಲ್ ಅವರು ದೂರು ಸಲ್ಲಿಸಿದ್ದಾರೆ. EDಯು ಪ್ರಕರಣದ ಬಗ್ಗೆ ಪರಿಶೀಲನೆ ಆರಂಭಿಸಿದೆ. ಆದರೆ ಬಾಳಪ್ಪ ಹಂದಿಗುಂದ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವರು ಶ್ರೀರಕ್ಷೆಯಾಗಿದ್ದಾರೆ ಎಂದು ಆರೋಪಿಸುತ್ತಿದ್ದ ಕೆ.ಎ.ಪಾಲ್ ಅವರು ಶನಿವಾರ (11.01.2025) ರಾಜ್ಯಪಾಲರಿಗೆ ದೂರು ಸಲ್ಲಿಸಿ ಬಾಳಪ್ಪ ಹಂದಿಗುಂದ ವಿರುದ್ದದ ಆರೋಪಗಳ ಬಗ್ಗೆ ತನಿಖೆಗೆ ನಿರ್ದೇಶನ ಕೋರಿದ್ದಾರೆ.
ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಬೇಕಿರುವ ಬಾಳಪ್ಪ ಹಂದಿಗುಂದ ಅವರು ಪ್ರಭಾವಿ ಅಧಿಕಾರಿಯಾಗಿದ್ದು ಅವರ ವಿರುದ್ಧ ಗಂಭೀರ ಪ್ರಕರಣಗಳಿದ್ದರೂ KIADBಯಲ್ಲೇ ಮುಂದುವರಿಸಲಾಗಿದೆ. ಇದರಿಂದಾಗಿ ಹಗರಣಗಳ ಕುರಿತ ಸಾಕ್ಷ್ಯಗಳನ್ನೂ ನಾಶಪಡಿಸುವ ಸಾಧ್ಯತೆಗಳಿದ್ದರೂ ಅವರನ್ನು ವರ್ಗಾಯಿಸದೆ ಇರುವ ಸರ್ಕಾರದ ನಡೆ ಬಗ್ಗೆಯೂ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಕೆ.ಎ.ಪಾಲ್ ಅವರು ಗಮನಸೆಳೆದಿದ್ದಾರೆ.