ಶಿವಮೊಗ್ಗ : ಕುಡಿಯುವ ನೀರಿನ ಬವಣೆ ನೀಗಿಸಲು ರಾಜ್ಯ ಸರಕಾರ ತಕ್ಷಣ ಅನುದಾನ ಬಿಡುಗಡೆ ಮಾಡಲಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.
ಗ್ಯಾರಂಟಿಗಳ ಮೇಲೆ ಸವಾರಿ ಮಾಡಿಕೊಂಡು ಅಧಿಕಾರದ ಗದ್ದುಗೆಗೆ ಬಂದ ಕಾಂಗ್ರೆಸ್ ಸರಕಾರ, ಈಗ ಕಂಡೀಷನ್ ಗಳನ್ನು ಹೇರುತ್ತ, ತಾನೇ ನೀಡಿದ ಭರವಸೆಗಳಿಂದ ಹಿಂದೆ ಸರಿದು, ಅವುಗಳ ಜಾರಿಗೆ, ನಿಯಮಗಳು ಅನ್ವಯ ಎಂದು, ನಿರಾಕರಿಸುವುದು, ಅತ್ಯಂತ ಬೇಜವಾಬ್ದಾರಿ ನಡವಳಿಕೆಯಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಗ್ಯಾರಂಟಿಗಳ ಜಾರಿಗೆ, ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಗೊಳಿಸಲು, ರಾಜ್ಯ ಸರಕಾರ, ಬೇಕಾಬಿಟ್ಟಿ ತೆರಿಗೆ ಏರಿಸುವ ಪ್ರಯತ್ನ ಮಾಡುತ್ತಿದ್ದು, ರಾಜ್ಯದ ವಿದ್ಯುತ್ ಗ್ರಾಹಕರಿಗೆ, ಬರೆ ಎಳೆಯುವ ನಿಟ್ಟಿನಲ್ಲಿ, ವಿದ್ಯುತ್ ಬಿಲ್ ಹೆಚ್ಚಳವಾಗುವಂತೆ ಕಿಲೋ ವ್ಯಾಟ್ ಮೇಲಿನ ಫಿಕ್ಸೆಡ್ ಶುಲ್ಕವನ್ನು ಏಕಾಏಕಿ ಏರಿಸಲಾಗಿದೆ ಎಂದ ಅವರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿರುವ ಸರಕಾರ, ಸರಕಾರಿ ಬಸ್ ಸೌಲಭ್ಯದಿಂದ ವಂಚಿತ ಜಿಲ್ಲೆಗಳಾದ ಮಲೆನಾಡು, ಕರಾವಳಿ ಹಾಗೂ ಇತರ ಜಿಲ್ಲೆಗಳ ಮಹಿಳೆಯರು ಸೌಲಭ್ಯದಿಂದ ವಂಚಿತರಾಗಿರುವ ಬಗ್ಗೆ, ದಿವ್ಯ ಮೌನ ತಾಳಿದೆ ಎಂದು ದೂರಿದರು. ಯಾವುದೇ ತಾರತಮ್ಯ ಇಲ್ಲದೆ, ಕಾರ್ಯ ನಿರ್ವಹಿಸುವ ಬಗ್ಗೆ ಅಧಿಕಾರದ ಗೌಪ್ಯ ಪ್ರಮಾಣ ಮಾಡಿದ ಮುಖ್ಯಮಂತ್ರಿ ಹಾಗೂ ಅವರ ಇತರ ಸಚಿವರುಗಳು ಸಮಾಜದ ಎಲ್ಲಾ ವರ್ಗಗಳಿಗೆ, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಮುಂಗಾರು ಮಳೆ ತಡವಾದ ಕಾರಣದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರವಾದ ಕುಡಿಯುವ ನೀರಿನ ಬಗ್ಗೆ ಹಾಹಾಕಾರ ಉಂಟಾಗಿದೆ ಎಂದು ಸರ್ಕಾರದ ಗಮನ ಸೆಳೆದಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯಲ್ಲಿ ಕಲುಷಿತ ಕುಡಿಯುವ ನೀರಿನ ಬಳಕೆಯಿಂದ, ಜನ ಬಳಲುತ್ತಿದ್ದು, ಕರುಳು ಬೇನೆ ಹಾಗೂ ಇತರ ಖಾಯಿಲೆಗಳಿಗೆ, ತುತ್ತಾಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದರೂ, ಇಡೀ ರಾಜ್ಯ ಸರಕಾರ ಕೇವಲ ಗ್ಯಾರಂಟಿ ಗಳ ಅನುಷ್ಟಾನದ ಬಗ್ಗೆಯೇ ಗೊಂದಲ ಮೂಡಿಸುತ್ತಾ, ತನ್ನ ಜವಾಬ್ದಾರಿ ಮರೆತಿದೆ ಎಂದು ಅಸಮಾಧಾನ ಹೊರಹಾಕಿದರು.
ರಾಜ್ಯ ಸರಕಾರ, ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು, ತಕ್ಷಣ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಸಂತ್ರಸ್ತ ಕುಟುಂಬಗಳಿಗೆ ನೆರವಿನ ಹಸ್ತ ಚಾಚಬೇಕು ಎಂದು ಅವರು ಆಗ್ರಹಿಸಿದರು.