📝 ಪ್ರಸಾದ್ ಬೈಂದೂರು ಬರೆಯುತ್ತಾರೆ..
ನೀರಿಲ್ಲದ ಮನೆಗಳಿಗೆ ನೀರು.. ಸೂರಿಲ್ಲದವರಿಗೆ ಸೂರು.. ನಿರುದ್ಯೋಗಿಗಳಿಗೆ ಉದ್ಯೋಗ.. ಅಸಹಾಯಕರಿಗೆ ಧೈರ್ಯ.. ಯಾವ ಸಂತರೂ ಕೈಗೊಳ್ಳದ ದಾಸೋಹ ನಡೆಸುತ್ತಾ ಸಾಮಾಜಿಕ ಹರಿಕಾರನೆನಿಸಿರುವ ಡಾ.ಗೋವಿಂದ ಪೂಜಾರಿ ಅವರ ಜನಸೇವೆಯ ಕೈಂಕರ್ಯ ಮುಂದುವರಿದಿದೆ..
ಮನೆಯನ್ನೇ ದಾನ ಮಾಡಿದ ಕರಾವಳಿಯ ಕರ್ಣ ಡಾ.ಗೋವಿಂದ ಬಾಬು ಪೂಜಾರಿ ಅವರು ಇದೀಗ ಮತ್ತೊಬ್ಬ ಬಡಪಾಯಿಗಾಗಿ ಮನೆ ನಿರ್ಮಿಸಿದ್ದಾರೆ. ಇದು ಪೂಜಾರಿಯವರ ಸಾರಥ್ಯದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಬಡಪಾಯಿಗಳಿಗೆ ಪ್ರದಾನ ಮಾಡುತ್ತಿರುವ ಐದನೇ ಮನೆ.
ಉಡುಪಿ ಜಿಲ್ಲೆ ಕುಂದಾಪುರದ ಕಾಳವರದಲ್ಲಿ ಆಶ್ರಯದಾತರೆನಿಸಿರುವ ಡಾ.ಗೋವಿಂದ ಬಾಬು ಪೂಜಾರಿಯವರ ಕಾಣಿಕೆಯ ಮಗದೊಂದು ಸೂರು ನಿರ್ಮಾಣಗೊಂಡಿದೆ. ಈ ಮೂಲಕ ಆಟೋ ಚಾಲಕನ ಕನಸು ನನಸಾಗಿಸಿದ್ದಾರೆ ಕರಾವಳಿ ಮಾಣಿಕ್ಯ ಡಾ. ಗೋವಿಂದ ಬಾಬು ಪೂಜಾರಿ.
ಹೌದು ಅದೆಷ್ಟೋ ವರ್ಷಗಳ ಕನಸಿನ ಗೂಡು ಆಟೋ ಚಾಲಕ ಸರಿಕೊಡ್ಲು ಮನೆ ಸತೀಶ್ ಪೂಜಾರಿಯವರದ್ದು. ಆದರೆ ವಿಧಿ ಆಟ ಯಾರ ಮಾತೂ ಕೇಳದೆ ಸತೀಶ್ ರವರ ಜೀವವನ್ನೇ ಕಿತ್ತುಕೊಂಡು ಇಡೀ ಕುಟುಂಬ ಚಿಂತಾಜನಕ ಪರಿಸ್ತಿತಿಯಲ್ಲಿ ಕುಗ್ಗಿಹೋಗಿದೆ. ಪ್ರತೀ ದಿನ ಕಣ್ಣೀರಿನಲ್ಲೇ ಕೈತೊಳೆಯುವಷ್ಟು ನೋವನ್ನು ಈ ಕುಟುಂಬದವರು ಅನುಭವಿಸುತ್ತಿದ್ದರು.
ಕುಂದಾಪುರ ಬಿಲ್ಲವ ಸಮಾಜ ಅಧ್ಯಕ್ಷರು ಮತ್ತು ಸಮಾಜ ಬಾಂಧವರು ಮನವಿ ಹಾಗೂ ಸ್ಥಳೀಯರ ಮಾಹಿತಿಯ ಮೇರೆಗೆ ಡಾ.ಗೋವಿಂದ ಬಾಬು ಪೂಜಾರಿ ಈ ಬಡಪಾಯಿ ಮನೆಗೆ ಬೇಟಿ ನೀಡಿದ್ದರು. ಅಲ್ಲಿ ಮೃತ ಸತೀಶ್’ರವರ ಕನಸಿನ ಮನೆ ನೋಡುತ್ತಾ, ನೊಂದ ಕುಟುಂಬದವರ ಪರಿಸ್ತಿತಿ ಅರಿತು, ಅರ್ದದಲ್ಲೇ ನಿಂತಿದ್ದ ಮನೆಯನ್ನು ಪರಿಪೂರ್ಣ ಮಾಡುವ ಭರವಸೆ ನೀಡಿದ್ದರು. ಮನೆಯನ್ನು ತಾವೇ ನಿರ್ಮಿಸಿಕೊಡುತ್ತೇನೆಂದೂ, ಸತೀಶ್’ರವರು ಸ್ವರ್ಗದಲ್ಲಿದ್ದರೂ ಅವರ ಕನಸಿಗಿಂತ ಹೆಚ್ಚು ತೃಪ್ತಿ ಸಿಗುವಂತೆ ಮನೆ ಪೂರ್ಣಗೊಳಿಸಿ ಕೊಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದರು ಡಾ.ಗೋವಿಂದ ಪೂಜಾರಿ.
ನುಡಿದಂತೆ ನಡೆದ ಡಾ.ಗೋವಿಂದ ಬಾಬು ಪೂಜಾರಿ, ತಾವು ಆಶ್ವಾಸನೆ ಕೊಟ್ಟ ಎರಡೇ ತಿಂಗಳಲ್ಲಿ ಆಟೋ ಚಾಲಕ ಸತೀಶ್ ಪೂಜಾರಿಯವರ ಕನಸಿನ ಮನೆ ಎದ್ದು ನಿಲ್ಲುವಂತೆ ಮಾಡಿದ್ದಾರೆ.
ಈ ಕನಸಿನ ಮನೆ ಇದೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಇದರ ಗೃಹಪ್ರವೇಶಕ್ಕೂ ಸಿದ್ದತೆ ನಡೆದಿದೆ. ಇದೇ ಅಕ್ಕೋಬರ್ 08, ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಗೃಹ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿದೆ.
ಯಾರಿವರು ಡಾ.ಗೋವಿಂದ ಪೂಜಾರಿ..?
ಕರಾವಳಿ ಮೂಲದ ಉದ್ಯಮಿ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್ ಸಹಿತ ಹಲವು ರಾಜ್ಯಗಳಲ್ಲಿ ಆಹಾರೋದ್ಯಮ ಕ್ಷೇತ್ರವನ್ನು ಮುನ್ಬಡೆಸುತ್ತಿರುವ ಡಾ.ಗೋವಿಂದ ಪೂಜಾರಿ ಬೆಂಗಳೂರನ್ನು ಕೇಂದ್ರಸ್ಥಾನವಾಗಿಸಿ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದ್ದಾರೆ.
ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿದ್ದಾಗ ಗೋವಿಂದ ಬಾಬು ಪೂಜಾರಿ ಮುಂಬೈಗೆ ತೆರಳಿ ಹೊಟೇಲ್ ಉದ್ಯಮದ ಕಾರ್ಮಿಕನಾಗಿ ಕೆಲಸ ಮಾಡಿ, ನಂತರ ತಾನೇ ಉದ್ಯಮ ಸಂಸ್ಥೆ ಕಟ್ಟಿದವರು. ಯಾರೂ ನಿರುದ್ಯೋಗಿಗಳಾಗಿರಬಾರದು ಎಂಬ ಮನಸ್ಥಿತಿ ಹೊಂದಿರುವ ಡಾ.ಗೋವಿಂದ ಪೂಜಾರಿಯವರು, ತಮ್ಮ ಒಡೆತನದ ChefTalk ಕಂಪನಿಯ ಜೊತೆ ಹಲವಾರು ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಸ್ವ ಉದ್ಯೋಗಾಕಾಂಕ್ಷಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಶ್ರೀ ವರಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ. ರಾಜ್ಯವ್ಯಾಪಿ ಸಣ್ಣ ಉದ್ದಿಮೆ ಆರಂಭಿಸುವವರ ಆರ್ಥಿಕ ನೆರವಿಗಾಗಿ ಶ್ರೀ ನಾರಾಯಣ ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ.
ಅಷ್ಟೇ ಅಲ್ಲ, ವಿದ್ಯುನ್ಮಾನ ಹಾಗೂ ಶಿಕ್ಷಣ ಕ್ಷೇತ್ರಕ್ಕೂ ಸೇವೆಯನ್ನು ವಿಸ್ತರಿಸಿ 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡುವ ಪ್ರಯತ್ನ ಇವರದ್ದು. ಜೊತೆಗೆ ಸಾವಿರಾರು ಕುಟುಂಬಗಳಿಗೆ ಜೀವಜಲ, ಅನ್ನ, ಆಹಾರ, ವೈದ್ಯಕೀಯ ಶಿಕ್ಷಣ ನೀಡಿದ ಸಾಧನೆ ಇವರದ್ದು. ಈ ಅನನ್ಯ, ಅಪೂರ್ವ ಸೇವೆಗಾಗಿಯೇ ಏಷ್ಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಅತ್ಯುನ್ನತ ಪುರಸ್ಕಾರ ನೀಡಿ ಗೌರವಿಸಿದೆ.