ವರದಿ: ಹೆಚ್ ಎಂ ಪಿ ಕುಮಾರ್
ಕೋಟೆನಾಡಲ್ಲಿ ಡಾಗ್ ಪಿಜಿ ಸೆಂಟರ್.. ಉದ್ಯೋಗ ಕಳೆದುಕೊಂಡ ಯವಕನ ಕಮಾಲ್.. ಇದು ಕೊರೊನಾ ಕೊಟ್ಟ ಐಡಿಯಾ..
ಚಿತ್ರದುರ್ಗ. ಸಾಮಾನ್ಯವಾಗಿ ಪೇಯಿಂಗ್ ಗೆಸ್ಟ್, ವೃದ್ಧರ ಪಾಲನಾ ಕೇಂದ್ರ, ಬೇಬಿ ಕೇರ್ ಸೆಂಟರ್ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಕೋಟೆನಾಡಲ್ಲಿ ಮನುಷ್ಯ ಪ್ರಿಯ ನಾಯಿಗಳ ಆರೈಕೆ ಕೇಂದ್ರ ಶುರುವಾಗಿದೆ. ಇದು ಕೊರೊನಾ ಕೊಟ್ಟ ಐಡಿಯಾ.
ಕೊರೊನಾ ಲಾಕ್‍ಡೌನ್ ನಿಂದಾಗಿ ಬಹಳಷ್ಟು ಮಂದಿ ಉದ್ಯೋಗ ಕಳೆದುಕೊಂಡು ಹುಟ್ಟೂರಿನತ್ತ ಮುಖ ಮಾಡಿದ್ದಾರೆ. ಈ ವೇಳೆ ಒಂದಷ್ಟು ಜನ ಕೃಷಿಗೆ ತೆರಳಿದರೆ, ಕೆಲವರು ಪ್ರಾವಿಜನ್ ಸ್ಟೋರ್ ಗಳನ್ನು ಪ್ರಾರಂಭಿಸಿದ್ದಾರೆ. ಇತ್ತ ಚಿತ್ರದುರ್ಗದ ಯುವಕನೊಬ್ಬ ಕೊಂಚ ಭಿನ್ನವಾಗಿ ಯೋಚಿಸಿ ಪ್ರಾರಂಭಿಸಿದ್ದೇ ಡಾಗ್ ಪೇಯಿಂಗ್ ಗೆಸ್ಟ್.
ಬೆಂಗಳೂರಿನಲ್ಲಿ ಉದ್ಯೋಗ ಕಳೆದುಕೊಂಡು ಚಿತ್ರದುರ್ಗಕ್ಕೆ ಬಂದ ಸಾಗರ್ ಚಳ್ಳಕೆರೆ ರಸ್ತೆಯ ಮಹೇಶ್ವರಿ ಲೇಔಟ್‍ನಲ್ಲಿ ಶ್ವಾನಗಳ ಪೇಯಿಂಗ್ ಗೆಸ್ಟ್ ಪ್ರಾರಂಭಿಸಿದ್ದಾರೆ. ಕೆಲಸದ ನಿಮಿತ್ತ ಊರುಗಳಿಗೆ ಹೋಗುವಾಗ ಮನೆಯಲ್ಲಿನ ಶ್ವಾನಗಳನ್ನು ಈ ಸೆಂಟರ್‍ಗೆ ತಂದು ಬಿಟ್ಟು ಸುರಕ್ಷಿತವಾಗಿ ಮತ್ತೆ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಏಳೆಂಟು ವರ್ಷಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವಾಗ ತಮ್ಮ ಮುದ್ದಿನ ಶ್ವಾನಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಇಲ್ಲದೆ ಕಾಯಿಲೆಗೆ ತುತ್ತಾಗಿ ಅವುಗಳು ಸಾವನ್ನಪ್ಪಿದ್ದವು. ಇದರಿಂದ ನೊಂದಿದ್ದ ಸಾಗರ್, ಅಂದಿನಿಂದ ಇಂತಹ ಶ್ವಾನಗಳಿಗಾಗಿ ಏನಾದರೂ ಮಾಡಬೇಕು ಅಂದುಕೊಂಡಿದ್ದ. ಆ ಕೆಲಸ ಈಗ ಕಾರ್ಯರೂಪಕ್ಕೆ ಬಂದಿದೆ.
ಚಿತ್ರದುರ್ಗ ನಗರದ ಹಲವು ಬಡಾವಣೆಗಳ ನಿವಾಸಿಗಳು ಇಲ್ಲಿಗೆ ತಮ್ಮ ಮುದ್ದಿನ ಶ್ವಾನಗಳನ್ನು ತಂದು ಬಿಟ್ಟು ಹೋಗುತ್ತಾರೆ. ಕಾಲಕಾಲಕ್ಕೆ ಊಟದ ಜೊತೆಗೆ, ಅವುಗಳಿಗೆ ಬೇಕಾದ ಔಷಧಿ ನೀರು ನೀಡುವ ಜೊತೆಗೆ, ಮನೆಯ ಅಂಗಳದಲ್ಲಿರುವ ಪುಟ್ಟ ಮೈದಾನದಲ್ಲಿ ಆಟ ಆಡಿಸುವ ಮೂಲಕ ಶ್ವಾನಗಳಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತಾರೆ. ಆ ಮೂಲಕ ಬದುಕು ಕಟ್ಟಿಕೊಳ್ಳುವ ಜೊತೆಗೆ ಶ್ವಾನಗಳ ಪ್ರೀತಿಯು ನನಗೆ ಸಿಗುತ್ತಿದೆ ಅಂತಾರೆ ಶ್ವಾನ ಪಿಜಿ ಸೆಂಟರ್ ಮಾಲೀಕ ಸಾಗರ್.
ಎಷ್ಟೇ ಕಷ್ಟ ಬಂದರೂ ಬದುಕನ್ನು ಕೈಚೆಲ್ಲದೆ ಜೀವನ ಕಟ್ಟಿಕೊಳ್ಳಬೇಕು ಎಂಬ ಛಲ ಇದ್ದರೆ ಒಂದಲ್ಲ ಒಂದು ಒಳ್ಳೆಯ ಕೆಲಸ ನಮ್ಮನ್ನು ಕೈ ಹಿಡಿಯುತ್ತವೆ ಎಂಬುದಕ್ಕೆ ಚಿತ್ರದುರ್ಗದ ಈ ಯುವಕ ಎಲ್ಲರಿಗೂ ಮಾದರಿಯಾಗಿದ್ದಾನೆ.