ಬೆಂಗಳೂರು (ಗ್ರಾ): ಶಿವಮೊಗ್ಗದ ಹುಣಸೋಡುವಿನಲ್ಲಿ ನಡೆದ ಅವಘಡದಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಕೂಡಲೇ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಕ್ರಷರ್ ಮಾಲೀಕರ ಸಭೆ ಕರೆದು ಕಾನೂನು ವ್ಯಾಪ್ತಿಯಲ್ಲಿ ಮಾತ್ರ ಕೆಲಸ ಮಾಡಬೇಕೆಂದು ಸೂಚಿಸಿ, ಕಾನೂನು ಮೀರಿದಲ್ಲಿ ಯಾವುದೇ ಮುಲಾಜಿಲ್ಲದೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕ ವೆಂಕಟರಮಣಯ್ಯ ಸಲಹೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಎಲ್ಲಾ ಗಣಿಗಾರಿಕೆ ಕೇಂದ್ರಗಳು, ಕ್ರಷರ್ ಮಾಲೀಕರ ಜೊತೆ ಸಭೆ ನಡೆಸಿ ಕಾನೂನು ವ್ಯಾಪ್ತಿಯಲ್ಲಿ ಕೆಲಸ ನಿರ್ವಹಣೆ ಮಾಡಿಸುವುದು ನಿಮ್ಮ ಮೇಲಿದೆ ಎಂದು ಶಾಸಕ ವೆಂಕಟರಮಣಯ್ಯ, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು, ಉಪ ವಿಭಾಗಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಟಿ.ಎಸ್ ಶಿವರಾಜ್ ಅವರ ಗಮನಸೆಳೆದಿದ್ದಾರೆ.
ತಾಲ್ಲೂಕು ಪಂಚಾಯತಿಯ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಂದರ್ಭದಲ್ಲಿ, ಪರಿಸ್ಥಿತಿ ಬಗ್ಗೆ ಬೊಟ್ಟು ಮಾಡಿದ ಶಾಸಕರು, ಇನ್ನೂ ತಾಲ್ಲೂಕಿನಲ್ಲಿ ಈಗಾಗಲೇ 86 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ೧೨ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನಿಗಿಸುವ ಕೆಲಸಕ್ಕೆ ಪ್ರಥಮ ಆದ್ಯತೆ ನೀಡಬೇಕು. ತಾಲ್ಲೂಕಿನಲ್ಲಿ ನೀರಿನ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ತಾಲ್ಲೂಕು ಪಂಚಾಯತ ಅಧ್ಯಕ್ಷ ನಾರಾಯಣಗೌಡ ಮಾತನಾಡಿ 36 ಭಾಗದಲ್ಲಿ ಬೋರ್ ವೆಲ್ ಗಳನ್ನು ಕೊರಸಲಾಗಿದೆ. ಆದರೆ ಪಂಪು ಮೋಟಾರು ಗಳಿಗೆ ಅನುದಾನವಿಲ್ಲದೆ ಕೊರೆದಿರುವ ಬೋರ್ ವೆಲ್ ಗಳು ದುಸ್ಥಿತಿಗೆ ತಲುಪುತ್ತಿವೆ. ಅಧಿಕಾರಿಗಳು ಜಿ.ಪಂ ಸಿಇಓ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡಬೇಕು ಎಂದರು. ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸಬ್ಸಿಡಿ ಯೋಜನೆಗಳ ಬಗ್ಗೆ ಹೆಚ್ಚು ತಿಳಿಸಬೇಕು. ಯಾವುದೇ ಇಲಾಖೆಯಲ್ಲಿನ ಅನುದಾನ ವಾಪಸ್ ಹೋಗದಂತೆ ಬಂದಿರುವ ಸಂಪೂರ್ಣ ಅನುದಾನವನ್ನು ರೈತರ ಅಭ್ಯುದಯಕ್ಕೆ ಬಳಸಬೇಕು ಎಂದರು.
ತಾ.ಪಂ ಅಧ್ಯಕ್ಷ. ನಾರಾಯಣಗೌಡ, ಉಪಾಧ್ಯಕ್ಷೆ ಯಶೋಧಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಲಾ ರಾಮಲಿಂಗಯ್ಯ. ತಾ.ಪಂ ಇಓ ಮುರುಡಯ್ಯ ಮೊಡ್ಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.