ದೊಡ್ಡಬಳ್ಳಾಪುರ: ಕಿಡಿಗೇಡಿಗಳ ಕೃತ್ಯಕ್ಕೆ ರಾಗಿ ಮೆದೆಗೆ ಬೆಂಕಿಗೆ ಆಹುತಿಯಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಸಮೀಪದ ಬೈಯಪ್ಪನಹಳ್ಳಿಯ ನರಸಯ್ಯ ಎಂಬುವವರ ಮೆದೆಗೆ ಬೆಂಕಿ ಬಿದ್ದಿದ್ದು, ಸುಮಾರು ೫ ಎಕರೆ ಜಮೀನಿನಲ್ಲಿ ಬೆಳೆದಿದ್ದ ರಾಗಿ ಭಸ್ಮವಾಗಿದೆ. ಸುಮಾರು 50 ಮೂಟೆ ರಾಗಿ ಇಳುವರಿಯ ನಿರೀಕ್ಷೆಯಿಟ್ಟುಕೊಂಡಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಾಗಿದೆ.
ಮೊದಲು ಪಕ್ಕದ ಜಮೀನಿನ ಬದಿಯಲ್ಲಿ ಕಾಣಿಸಿಕೊಂಡ ಬೆಂಕಿ ಬಣವೆಗೂ ವ್ಯಾಪಿಸಿದೆ.ಆ ಪ್ರದೇಶದಲ್ಲಿ ರಾಗಿ ಬಣವೆಯ ಜೊತೆಗೆ ಹುಲ್ಲನ್ನೂ ಸಹ ಹಾಕಲಾಗಿತ್ತು. ಇದರ ಜೊತೆಗೆ 4 ಮೂಟೆ ಹರಳು, 2 ಮೂಟೆ ತೊಗರಿಯನ್ನು ಸಹ ಬಣವೆಯ ಮೇಲೆ ಇಟ್ಟಿದ್ದರಿಂದ ಹುಲ್ಲಿನ ಜತೆಗೆ ಈ ಬೆಳೆಗಳು ನಾಶವಾಗಿವೆ.
ಈ ಬಗ್ಗೆ ನೋವು ತೋಡಿಕೊಂಡ ರೈತ ನರಸಯ್ಯ, ವರ್ಷವೆಲ್ಲಾ ಕಷ್ಟಪಟ್ಟು ಬೆಳೆದಿದ್ದ ಬೆಳೆಯಿದು. ಈಗಾಗಲೇ ಕಣ ಮಾಡಬೇಕು ಎಂದು ಎಲ್ಲಾ ತಯಾರಿ ಮಾಡಿಕೊಂಡಿದ್ದೆವು. ಇನ್ನೆರಡು ದಿನದಲ್ಲಿ ಕಣ ಮಾಡುತ್ತಿದ್ದೆವು. ಆದರೆ ಈಗ ಬೆಂಕಿ ಬಿದ್ದಿದೆ. ಬೆಳೆ ನಮ್ಮ ಮನೆಗೆ ಬರುವ ಈ ರೀತಿ ಆಗಿದೆ. ಹಸುಗಳಿಗೆ ಹುಲ್ಲು ಹೇಗೆ ಹೊಂದಿಸುವುದು ಎಂದರು.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬದಿ ನಡೆಸಿದ ಕಾರ್ಯಾಚರಣೆಯೂ ಪ್ರಯೋಜನವಾಗಿಲ್ಲ. ಕಾರ್ಯಾಚರಣೆ ಮುಗಿಯುವಷ್ಟರಲ್ಲಿ ರಾಗಿ ಮೆದೆ ಸಂಪೂರ್ಣ ನಾಶವಾಗಿದೆ.