ದೊಡ್ಡಬಳ್ಳಾಪುರ: ನಗರದಲ್ಲಿ ಸೋಮವಾರ ಮಧ್ಯಾಹ್ನ ಹಾಗೂ ರಾತ್ರಿ ನಡೆದಿದ್ದ ಎರಡು ಪ್ರತ್ಯೇಕ ಸರ ಕಳವು ಪ್ರಕರಣಗಳನ್ನು ಘಟನೆ ನಡೆದ ಕೆಲ ಗಂಟೆಗಳಲ್ಲಿ ಪೊಲೀಸರು ಬೇಧಿಸಿದ್ದಾರೆ. ಸರಗಳವು ಪ್ರಕರಣಗಳಲ್ಲಿ ಗೆದ್ದಲಪಾಳ್ಯದ ನಿವಾಸಿಗಳಾದ ಸುಬ್ರಮಣಿ (23), ಪ್ರವೀಣ್ (19) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಈ ಹಿಂದೆ ಕೂಡ ಸರಗಳುವಿಗೆ ಯತ್ನಿಸಿದ್ದ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸೋಮವಾರ ಮಧ್ಯಾಹ್ನ 3.30 ರ ಸುಮಾರಿಗೆ ಶಾಂತಿನಗರ 10ನೇ ಕ್ರಾಸಿನಲ್ಲಿ ಕರೇನಹಳ್ಳಿ ನಿವಾಸಿ ಭಾರತಿ ಎಂಬುವರ 23 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಇದಾದ ಕೆಲ ಗಂಟೆಗಳ ಅಂತರದಲ್ಲೇ ಕುಚ್ಚಪ್ಪನಪೇಟೆಯಲ್ಲಿ ವೃದ್ಧೆಯ 20 ಗ್ರಾಂ ತೂಕದ ಮಾಂಗಲ್ಯಸರ ಕಸಿದು ಪರಾರಿಯಾಗಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಗ್ರಾಮಾಂತರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಶಾಂತಿನಗರ ಪ್ರಕರಣದಲ್ಲಿ ಸರಗಳ್ಳರ ಚಲನವಲನದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.