ದೊಡ್ಡಬಳ್ಳಾಪುರ : ನ್ಯಾ. ಸದಾಶಿವ ಆರೋಗದ ವರದಿ ಜಾರಿಗೆ ಒತ್ತಾಯಿಸಿ ಮಾದಿಗ ಸಮುದಾಯ ಚೈತನ್ಯ ರಥಯಾತ್ರೆ ಆರಂಭಿದ್ದು, ಒಳ ಮೀಸಲಾತಿಗೆ ಒತ್ತಾಯಿಸಿ ಮಾರ್ಚ್ 8ರಂದು ಬೆಂಗಳೂರಿನಲ್ಲಿ ಮಾದಿಗರ ವಿರಾಟ್ ಪ್ರದರ್ಶನ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಮುಂದಾಗಿದೆ.
ನ್ಯಾ. ಸದಾಶಿವ ಆರೋಗದ ವರದಿ ಜಾರಿಗೆ ಒತ್ತಾಯಿಸಿ ಹೆಣ್ಣೂರು ಲಕ್ಷ್ಮೀನಾರಾಯಣ ಸಾರಥ್ಯದಲ್ಲಿ ಚೈತನ್ಯ ರಥಯಾತ್ರೆಯನ್ನ ಆರಂಭಿಸಿದ್ದು, ಜನವರಿ 20ರಂದು ಆರಂಭವಾದ ಚೈತನ್ಯ ರಥಯಾತ್ರೆ ರಾಜ್ಯದ 175 ತಾಲೂಕುಗಳಿಗೂ ಭೇಟಿ ಕೊಟ್ಟು ಮಾದಿಗ ಸಮುದಾಯವನ್ನು ಒಟ್ಟು ಗೂಡಿಸುವ ಕೆಲಸ ಮಾಡುತ್ತಿದೆ. ಮಂಗಳವಾರ ರಾತ್ರಿ ದೊಡ್ಡಬಳ್ಳಾಪುರ ನಗರಕ್ಕೆ ತಲುಪಿದ ಚೈತನ್ಯ ರಥಯಾತ್ರೆ ತಾಲೂಕಿನ ಮಾದಿಗ ಸಮುದಾಯಕ್ಕೆ ಜಾಗೃತಿ ಮೂಡಿಸಿತು,

ಇದೇ ವೇಳೆ ಮಾತನಾಡಿದ ಹೆಣ್ಣೂರು ಲಕ್ಷ್ಮೀನಾರಾಯಣ, ಮಾದಿಗರ ಚಳುವಳಿಯು 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಜಾತಿ, ಭಾಷೆ ಧರ್ಮದ ವಿಚಾರದಲ್ಲಿ ಬೇಧ ಭಾವ ಮಾಡಬಾರದೆಂದು ಸಂವಿಧಾನದ ಪೀಠಿಕೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಉಲ್ಲೇಖಿಸಿದ್ದಾರೆ. ಅದರೂ, ಸಮಾಜದಲ್ಲಿ ನಮ್ಮನ್ನು ಅಸ್ಪಷ್ಯರಂತೆಯೇ ನೋಡುತ್ತಿದ್ದಾರೆ.ಬಹುತೇಕ ಸರ್ಕಾರಿ ನೌಕರಿಗಳಲ್ಲಿ ನಮ್ಮ ಸಮುದಾಯದ ಜನತೆಗೆ ಉದ್ಯೋಗಾವಕಾಶಗಳಿಲ್ಲ ಎಂದು ಬೇಸರ ಹೊರಹಾಕಿದರು.
ಈ ಹಿಂದೆ ಸದಾನಂದ ಗೌಡರು ಮುಖ್ಯಮಂತ್ರಿಯಾದ್ದಾಗಲೇ ಈ ವರದಿ ಜಾರಿ ಮಾಡುವಂತೆ ಚಳುವಳಿ ನಡೆದಿದೆ. ಅದರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಕೇವಲ ಆಶ್ವಾಸನೆ ನೀಡುತ್ತಿದೆ ಹೊರತು ವರದಿ ಜಾರಿ ಮಾಡಲು ಮುಂದಾಗದೆ ಇರುವುದೇ ಖಂಡನೀಯ ಎಂದರು.
ಮೀಸಲಾತಿಗೆ ಕುರಿತಂತೆ ರಾಜ್ಯಗಳೇ ತೀರ್ಮಾನ ತೆಗೆದುಕೊಳ್ಳಬಹುದು ಮತ್ತು ಒಳ ಮೀಸಲಾತಿಯನ್ನು ಮಾಡಬಹುದು ಎಂದು ಸುಪ್ರೀಂಕೋರ್ಟ್ ಆಶಯ ವ್ಯಕ್ತಪಡಿಸಿದೆ ಎಂದರು.





















































