ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ:ನಗರದ ಅರಳು ಮಲ್ಲಿಗೆ ಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಜನಪರ ಸಂಘಟನೆಗಳ ವತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ನಡೆಯಿತು.
ಈ ವೇಳೆ ಕನ್ನಡ ಪಕ್ಷದ ಮುಖಂಡ ಸಂಜೀವ ನಾಯಕ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವ ಸಮ್ಮತವಾದ ಪ್ರಪಂಚದಲ್ಲೇ ಅತ್ಯುತ್ತಮವಾದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಜೀವಪರ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಸಿಐಟಿಯು ಮುಖಂಡ ಪಿಎ ವೆಂಕಟೇಶ್ ಮಾತನಾಡಿ ಮುಸ್ಲಿಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಲ್, ಹಿಂದುಗಳಿಗೆ ರಾಮಾಯಣ ಮಹಾಭಾರತ ಶ್ರೇಷ್ಠಗ್ರಂಥವಾದರೆ ಇಡೀ ಭಾರತೀಯರಿಗೆ ನಮ್ಮ ಹೆಮ್ಮೆಯ ಸಂವಿಧಾನ ಶ್ರೇಷ್ಠವಾದ ಗ್ರಂಥ, ಸಂವಿಧಾನವೂ ಯಾವುದೇ ವ್ಯಕ್ತಿಯನ್ನು ಧರ್ಮ, ಜಾತಿ, ಭಾಷೆ, ಆಧಾರದ ಮೇಲೆ ತಾರತಮ್ಯ ತೋರುವುದಿಲ್ಲ, ಲಿಂಗ ಅಸಮಾನತೆಯನ್ನು ಸಹಿಸುವುದಿಲ್ಲ. ಇಂತಹ ಜೀವಪರ ಮೌಲ್ಯಗಳನ್ನು ಭಾರತೀಯರಾದ ನಾವೆಲ್ಲರೂ ಪಾಲಿಸುವುದರಿಂದ ದೇಶದ ಸಮಗ್ರತೆ ಮತ್ತು ಐಕ್ಯತೆ ಗಟ್ಟಿಗೊಳ್ಳುತ್ತದೆ, ಅಸಮಾನತೆ ಅಳಿದು ಸರ್ವರೂ ಸ್ವಾಭಿಮಾನದಿಂದ ಬದುಕುವಂತಾಗುತ್ತದೆ ಎಂದರು.
ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸುಮಾರು ಐದು ನೂರು ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಹಂಚಿ ಸಂವಿಧಾನದ ಆಶಯಗಳನ್ನು ಮಕ್ಕಳಿಗೆ ಬೋಧನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಡಿ.ಪಿ.ಅಂಜನೇಯ,ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ರಾಜುಸಣ್ಣಕ್ಕಿ, ತಾಲ್ಲೂಕು ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಮುನಿಪಾಪಯ್ಯ, ಶಿವರಾಜ್ ಕುಮಾರ್ ಕನ್ನಡ ಸೇನಾ ಸಮಿತಿಯ ಅಧ್ಯಕ್ಷ ಚೌಡರಾಜ್, ಕನ್ನಡಪರ ಸಂಘಟನೆಯ ಮುಖಂಡರಾದ ಮಂಜುನಾಥ್, ಮುಖ್ಯೋಪಾಧ್ಯಾಯರಾದ ಮಂಜುಳ ನಾಯ್ಕ್, ಶಿಕ್ಷಕರಾದ ಜಯಕುಮಾರ್, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.




















































