ಹೊಸದಿಲ್ಲಿ: ರಾಜಧಾನಿ ದೆಹಲಿ ಹೊರವಲಯದ ಬವಾನಾ ಪ್ರದೇಶದಲ್ಲಿರುವ ಪಾದರಕ್ಷೆ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ.
ಕಾರ್ಖಾನೆಯ ನೆಲಮಾಳಿಗೆಯಲ್ಲಿರುವ ಪಾದರಕ್ಷೆಗಳ ಗೋಡೌನ್‌ನಲ್ಲಿ ಬೆಂಕಿ ಸಂಭವಿಸಿದೆ. ಇದು 150 ಚದರ ಮೀಟರ್ ವಿಸ್ತೀರ್ಣದಲ್ಲಿ ನೆಲಮಾಳಿಗೆ, ನೆಲ ಮಹಡಿ ಮತ್ತು ಎರಡು ಹೆಚ್ಚುವರಿ ಮಹಡಿಗಳನ್ನು ಹೊಂದಿದೆ.
ಸೆಕ್ಟರ್ -1, ಬವಾನಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಾತ್ರಿ 10:14 ಕ್ಕೆ ಕರೆ ಬಂದಿದೆ. ಆ ಕೂಡಲೇ ಅಗ್ನಿ ಶಾಮಕ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್) ನಿರ್ದೇಶಕ ಅತುಲ್ ಗರ್ಗ್ ಅವರು ಮಾಧ್ಯಮಗಳಿಗೆ ಮಾಹಿತಿ ಒದಗಿಸಿದ್ದಾರೆ.




























































