ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ದಂಪತಿಗಳನ್ನು ದೂರಮಾಡಿ ಅಸ್ತಿ ಕಬಳಿಸಲು ಸಚಿವ ಭೈರತಿ ಸುರೇಶ್ ಅಪ್ತರೆಂದು ಹೇಳಿಕೊಂಡು ಯುವಕರ ಗುಂಪು ದಾಂಧಲೆ ನಡೆಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ರೌಡಿಗಳ ಅಟ್ಟಹಾಸಕ್ಕೆ ಪೊಲೀಸರೂ ಸಾಥ್ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ. ಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಸೋಮವಾರ ದೂರು ಸಲ್ಲಿಕೆಯಾಗಿದೆ.
ಹೆಣ್ಣೂರು ಸಮೀಪ ವಾಸವಿರುವ ಸಾಜಿ ಜೋಸೆಫ್ ಹಾಗೂ ಸಿನಿ ಸಾಜಿ ದಂಪತಿ ನಡುವೆ ವೈವಾಹಿಕ ಕಲಹಗಳು ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಸಾಜಿ ಜೋಸೆಫ್ ಅವರು ವಾಸವಿರುವ ಮನೆ ಸಮೀಪವೇ ತಮ್ಮ ಪತ್ನಿ ಹೆಸರಲ್ಲೂ ನಿವೇಶನ ಖರೀದಿಸಿದ್ದು, ಪತ್ನಿಯ ಜಿಪಿಎ ಮೂಲಕ ನಿವೇಶನ ಉಪಯೋಗಿಸುತ್ತಾ ಬಂದಿದ್ದಾರೆ. ಆದರೆ ಯಾವಾಗ ತಮ್ಮ ದಾಂಪತ್ಯದಲ್ಲಿ ವಿರಸ ಉಂಟಾಯಿತೋ, ತಮ್ಮ ವಿರುದ್ಧ ಹಲವಾರು ದೂರುಗಳನ್ನು ಸಲ್ಲಿಸಿ ಪತ್ನಿ ಸಿನಿ ಸಾಜಿ ಕಿರುಕುಳ ನೀಡಿದ್ದಾರೆ ಎಂದು ಸಾಜಿ ಜೋಸೆಫ್ ಆರೋಪಿಸಿದ್ದಾರೆ. ತಮ್ಮ ಹೆಸರಲ್ಲಿ ನಕಲಿ ಜಿಪಿಎ ಮಾಡಿಸಲಾಗಿದೆ ಎಂದೂ ಆರೋಪಿಸಿ ಪತ್ನಿ ಪ್ರಕರಣ ದಾಖಲಿಸಿದ್ದಾರೆ ಎಂದು ಪತಿ ಆರೋಪ ಮಾಡಿದ್ದಾರೆ.
ಅಪರಿಚಿತರು ಮಾರುತಿ ಇಸಿಒ ವ್ಯಾನ್ (KA01 MT 0568)ನಲ್ಲಿ ನಿಷೇಧಿತ, ರೊಟ್ವೀಲರ್ ನಾಯಿಯನ್ನು ಕರೆತಂದಿದ್ದು ಆ ಮೂಲಕ ತಮ್ಮ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಸಿನಿ ಸಾಜಿ ಉಪಸ್ಥಿತಿಯಲ್ಲೇ ದಾಂಧಲೆ ನಡೆಸಿರುವ ಹೆಣ್ಣೂರು ಗೋಪಿ, ತಾನು ಸಚಿವ ಭೈರತಿ ಅವರ ಆಪ್ತನಾಗಿದ್ದು ಸಚಿವರು ಈ ನಿವೇಶನವನ್ನು ಖರೀದಿಸುತ್ತಿದ್ದಾರೆ. ಅಡ್ಡಿಪಡಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾನೆ ಎಂದು ಸಾಜಿ ಜೋಸೆಫ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಸುಪಾರಿ ಕಿಲ್ಲರ್ ಎಂದು ಹೇಳಿಕೊಂಡು ಸುಮಾರು 20-30 ಜನರು ತಮ್ಮ ನಿವೇಶನದಲ್ಲೇ ಅಕ್ರಮವಾಗಿ ಉಳಿದುಕೊಂಡು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ತಮ್ಮ ನಿವೇಶನ ಸಮೀಪದ ಕ್ಯಾಮರಾವನ್ನು ತಿರುಗಿಸಿ ತನ್ನನ್ನು ಕೊಲ್ಲಲು ಪ್ರಯತ್ನ ನಡೆಸಿದ್ದಾರೆ, ನಿವೇಶನದ ಕಟ್ಟಡದಲ್ಲಿ ವಾಸ್ತವ್ಯವಿರುವ ಬಾಡಿಗೆದಾರರಿಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಈ ದೂರಿನಲ್ಲಿ ಆರೋಪ ಮಾಡಿದ್ದಾರೆ.
ಸಚಿವ ಭೈರತಿ ಸುರೇಶ್ ಅವರ ಆಪ್ತರೆಂದು ಹೇಳಿ ರೌಡಿ ಗ್ಯಾಂಗ್ ನಡೆಸಿರುವ ಕೃತ್ಯದ ಬಗ್ಗೆ ಹೆಣ್ಣೂರು ಠಾಣೆಯ ಪೊಲೀಸರ ಗಮನಕ್ಕೆ ತಂದರೂ ಯಾವುದೇ ರೀತಿ ಪ್ರಕರಣ ದಾಖಲಿಸದೆ ಏನ್.ಸಿ.ಆರ್.ದಾಖಲಿಸಿಕೊಂಡಿದ್ದಾರೆ ಎಂದು ಸಾಜಿ ಜೋಸೆಫ್ ಅವರು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿರುವ ದೂರಿನಲ್ಲಿ ಗಮನಸೆಳೆದಿದ್ದಾರೆ. ಯುವಕರ ಪುಂಡಾಟದ ವೀಡಿಯೋ ಹಾಗೂ ಫೋಟೋಗಳನ್ನು ಸಂಗ್ರಹಿಸಿರುವ ಸಾಜಿ ಜೋಸೆಫ್, ಈ ದಾಖಲೆಗಳೊಂದಿಗೆ ದೂರು ನೀಡಿದ್ದು, ಭೈರತಿ ಸುರೇಶ ಸಹಚರರೆನ್ನಲಾದ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ.