ಚಿಕ್ಕಮಗಳೂರು: ಒಂದೆಡೆ ಕಾಂಗ್ರೆಸ್ ಪಕ್ಷವು ಭಾರತ ಜೋಡೋ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಪರ್ಸಂಟೇಜ್ ಹಗರಣ, ಪಿಎಸ್ಐ ಮತ್ತಿತರ ನೇಮಕಾತಿ ಕರ್ಮಕಾಂಡಗಳನ್ನು ಜಗಜ್ಜಾಹೀರು ಮಾಡುತ್ತಿದ್ದರೆ, ಇನ್ನೊಂದೆಡೆ ಹಿಂದೂ ಸಂಘಟನೆಗಳೂ ರಣಕಹಳೆ ಮೊಳಗಿಸಲು ರಣತಂತ್ರ ರೂಪಿಸುತ್ತಿದೆ. ರಾಜ್ಯದಲ್ಲಿರುವ ಬೊಮ್ಮಾಯಿ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದು ರಣಕಹಳೆ ಮೊಳಗಿಸಲು ಹಿಂದೂ ಸಂಘಟನೆಗಳು ತಯಾರಿ ನಡೆಸಿವೆ. ಮುಂದಿನ ತಿಂಗಳು ಚಿಕ್ಕಮಗಳೂರಿನಲ್ಲಿ ನಡೆಯುವ ದತ್ತಮಾಲಾ ಅಭಿಯಾನದಲ್ಲಿ ಹಿಂದೂ ಕಾರ್ಯಕರ್ತರು ಬಸವರಾಜ್ ಬೊಮ್ಮಾಯಿ ಸರ್ಕಾರದ ವಿರುದ್ಧವೇ ಹೋರಾಟ ನಡೆಸುವ ಸುಳಿವು ನೀಡಿರುವುದು ಅಚ್ಚರಿ ಹಾಗೂ ಕುತೂಹಲಕಾರಿ ಬೆಳವಣಿಗೆ ಎನಿಸಿದೆ.
ನವೆಂಬರ್ 7ರಿಂದ 13ರವರೆಗೆ ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಕುರಿತಂತೆ ಮಾಹಿತಿ ನೀಡುವ ಸಲುವಾಗಿ ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, 7 ದಿನಗಳ ಕಾಲ ನಡೆಯಲಿರುವ ದತ್ತಮಾಲಾ ಅಭಿಯಾನದಲ್ಲಿ, ನ. 7ರಂದು ದತ್ತ ಭಕ್ತರು ದತ್ತಮಾಲೆ ಧರಿಸಲಿದ್ದಾರೆ ಎಂದರು.
ಈ ಬಾರಿಯ ಅಭಿಯಾನ ಕೂಡಾ ದತ್ತಪೀಠಕ್ಕಾಗಿ ನಡೆಸುವ ಹೋರಾಟವೇ ಆಗಿದ್ದು, ದೇಶದ ವಿವಿಧೆಡೆಯಿಂದ ವಿವಿಧ ಸಂತರು ಭಾಗವಹಿಸಲಿದ್ದಾರೆ. ಜೊತೆಗೆ ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಕೂಡಾ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಬಿಜೆಪಿ ಸರ್ಕಾರಕ್ಕೆ ನ.13ರ ಗಡುವು:
ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಗಂಗಾಧರ್ ಕುಲಕರ್ಣಿ ಅವರು ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
ದತ್ತಪೀಠ ವಿಚಾರವಾಗಿ ಹಿಂದೂ ಸಂಘಟನೆಗಳು 18 ವರ್ಷಗಳಂದ ಸುಧೀರ್ಘ ಹೋರಾಟ ನಡೆಸುತ್ತಿವೆ. ನಮ್ಮ ಆಗ್ರಹದಂತೆ, ನ್ಯಾಯಾಲಯ ಕೂಡಾ ಹಿಂದೂ ಅರ್ಚಕರ ನೇಮಕ ಮಾಡುವಂತೆ ಆದೇಶಿಸಿದೆ. ಅಷ್ಟೇ ಅಲ್ಲ, ಸದನ ಸಮಿತಿ ಕೂಡಾ ವರದಿ ನೀಡಿದೆ. ಆದರೂ, ರಾಜ್ಯ ಸರ್ಕಾರ ಮಾತ್ರ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ನವೆಂಬರ್ 13ರೊಳಗೆ ಹಿಂದೂ ಅರ್ಚಕರನ್ನು ನೇಮಕ ಮಾಡದಿದ್ದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಗಡುವು ನೀಡಿದ ಅವರು, ಈ ವಿಚಾರದಲ್ಲಿ ಅಹಿತಕರ ಘಟನೆ ಸಂಭವಿಸಿದರೆ ರಾಜ್ಯ ಸರಕಾರವೇ ಹೊಣೆಯಾಗಲಿದೆ. ಅಷ್ಟೇ ಅಲ್ಲ, ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
























































