ಬೆಂಗಳೂರು: ಹಿಂದಿನ ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಲೋಕಾಯುಕ್ತ ತನಿಖೆ ಬಿರುಸುಗೊಂಡಿದೆ. ಗುತ್ತಿಗೆ ಕರ್ಮಕಾಂಡ ಕುರಿತಂತೆ ಸಿಐಡಿ ತನಿಖಾ ತಂಡ ಭಾರೀ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಇದೇ ವೇಳೆ, ಈ ಹಗರಣವು ಹಿಂದಿನ ಬಿಜೆಪಿ ಸರ್ಕಾರದ ಅವ್ಯವಹಾರಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಹೇಳಿಸಿದ್ದಾರೆ.
ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ನಲ್ಲಿ (ಡಿಡಿಯುಟಿಟಿಎಲ್) ಹಿಂದಿನ ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ 15.11.2021 ರಿಂದ 11.01.2022 ರವರೆಗೆ ನಡೆದಿರುವ ರೂ.47.10 ಕೋಟಿಗಳ ತುಂಡು ಗುತ್ತಿಗೆ ಕಾಮಗಾರಿಯ ಅವ್ಯವಹಾರಗಳ ಆರೋಪ ಬಗ್ಗೆ 2023ರ ಏಪ್ರಿಲ್ ತಿಂಗಳಲ್ಲಿ ಈಗಿನ ವ್ಯವಸ್ಥಾಪಕ ನಿರ್ದೇಶಕರು ಟ್ರಕ್ ಅಸೋಸಿಯೇಷನ್ಗಳನ್ನು ಪ್ರತಿನಿಧಿಸುವ ಕಂಪನಿಯ ನಿರ್ದೇಶಕರುಗಳಿಗೆ ಒದಗಿಸಿದ ಮಾಹಿತಿ/ದಾಖಲಾತಿಗಳನ್ನೊಳಗೊಂಡ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು 18-04-2023 ರಿಂದ 21-04-2023 ರವರೆಗೆ ಸುಮಾರು 14000ಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ವಶಪಡಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.
ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ನ 194ನೇ ನಿರ್ದೇಶಕ ಮಂಡಳಿ ಸಭೆಯ ನಡಾವಳಿಯಲ್ಲಿ ರೂ.10.00 ಕೋಟಿವರೆಗೆ ತುಂಡು ಗುತ್ತಿಗೆ ನೀಡಲು ಅಧಿಕಾರವಿದೆ ಎಂದು ಕೆಲವರು ತಿರುಚಿ ತುಂಡು ಗುತ್ತಿಗೆ ನೀಡಿ ಅಕ್ರಮವೆಸಗಿ ಡಿಡಿಯುಟಿಟಿಎಲ್ಗೆ ನಷ್ಟ ಉಂಟು ಮಾಡಿದ್ದಾರೆ ಎಂಬುದು ಗಂಭೀರ ಆರೋಪ. ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, 23.09.2023 ರಂದು ಪ್ರಕರಣ ದಾಖಲಾಗಿತ್ತು. ಹೆಚ್ಚಿನ ತನಿಖೆಗಾಗಿ ಪ್ರಕರಣ C.I.D ಗೆ ವರ್ಗಾವಣೆಗೊಂಡಿರುತ್ತದೆ. C.I.D ಅಧಿಕಾರಿಗಳು 18.03.2024ರಂದು ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಗೆ ಭೇಟಿ ನೀಡಿ 600 ಕ್ಕೂ ಹೆಚ್ಚು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಹಿಂದಿನ ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ನಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಮಾನ್ಯ ಲೋಕಾಯುಕ್ತರು, C.I.D ಮತ್ತು C & AG ಸಂಸ್ಥೆಗಳು ವಿಚಾರಣೆ/ತನಿಖೆಯನ್ನು ಕೈಗೊಂಡಿರುವುದು ಸ್ವಾಗತಾರ್ಹ ಹಾಗೂ ಗಮನಾರ್ಹ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಚಾಲ್ತಿಯಲ್ಲಿರುವ ಕಾಯ್ದೆಗೆ ವಿರುದ್ಧವಾಗಿ ರೂ.10 ಕೋಟಿಯವರೆಗೆ ತುಂಡು ಗುತ್ತಿಗೆ ನೀಡಲು ಅನುಮೋದನೆ ನಿರ್ಣಯ ಕೈಗೊಳ್ಳಲಾಗಿತ್ತು.ಆದರೆ ಇದಕ್ಕೆ ಕಾನೂನಿನಡಿ ಒಪ್ಪಿಗೆ ಇರಲಿಲ್ಲ. ಯಾವುದೇ ತುಂಡು ಗುತ್ತಿಗೇ ನೀಡದೆ ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದು ಅಕ್ರಮ ಎಸಗಿರುವ ಮಾಹಿತಿ ಎಂದು ದೂರಿನಲ್ಲಿ ಹೇಳಿರುವುದು. ಹಿಂದಿನ ಬಿಜೆಪಿ ಸರ್ಕಾರದ ಅವ್ಯವಹಾರಗಳಿಗೆ ಸಾಕ್ಷಿಯಾಗಿರುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಹಿಂದಿನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರು, ಹಾಗೂ ಇತರರು ಅಕ್ರಮದಲ್ಲಿ ಭಾಗಿಯಾಗಿರುವ ಮಾಹಿತಿಯಿದೆ ಎಂದಿರುವ ಅವರು ತನಿಖೆಯ ವೇಳೆ ಎಲ್ಲಾ ವಿಷಯ ಬೆಳಕಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. .