ಮುಂಬೈ: ಚಲನಚಿತ್ರ ನಿರ್ಮಾಪಕ ಮತ್ತು ಸೆಲೆಬ್ರಿಟಿ ಟಾಕ್ ಶೋ ನಿರೂಪಕ ಕರಣ್ ಜೋಹರ್ ಅವರು ಮುಂಬೈನಲ್ಲಿ ಆಯೋಜಿಸಿದ್ದ ಬೆರಗುಗೊಳಿಸುವ ಸಮಾರಂಭದಲ್ಲಿ, ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಅವರು 71 ನೇ ವಿಶ್ವ ಸುಂದರಿ ಕಿರೀಟವನ್ನುತನ್ನದಾಗಿಸಿದರು. ಸುಮಾರು 28 ವರ್ಷಗಳ ನಂತರ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆದಿದ್ದು ಈ ಸನ್ನಿವೇಶ ಜಗತ್ತಿನ ಗಮನಸೆಳೆಯಿತು.
ಕ್ರಿಸ್ಟಿನಾ ಅವರಿಗೆ ಈ ಕಿರೀಟವನ್ನು ಮಿಸ್ ವರ್ಲ್ಡ್ 2023 ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ತೊಡಿಸಿದರು. ಲೆಬನಾನ್‌ನ ಯಾಸ್ಮಿನಾ ಜೈಟೌನ್, ಟ್ರಿನಿಡಾಡ್ ಮತ್ತು ಟೊಬಾಗೋದ ಅಚೆ ಅಬ್ರಹಾಮ್ಸ್ ಮತ್ತು ಬೋಟ್ಸ್‌ವಾನಾದ ಲೆಸೆಗೊ ಚೊಂಬೋ ಅವರಂತಹ ಪ್ರಬಲ ಸ್ಪರ್ಧಿಗಳ ನಡುವೆ ಕ್ರಿಸ್ಟಿನಾ ಅವರು ಗೆಲುವಿನ ನಗೆ ಬೀರಿದರು. ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಪ್ರತಿಷ್ಠಿತ ಟಾಪ್ 8 ರಲ್ಲಿ ಸ್ಥಾನ ಪಡೆದರು.






















































