ಇದು ಅಚ್ಚರಿ ಹಾಗೂ ಕುತೂಹಲಕಾರಿ ಸುದ್ದಿ. ತನಗಾಗದವರ ವಿರುದ್ದ ಸೇಡು ತೀರಿಸಲು ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಈ ಅಪರಾಧ ಸುದ್ದಿಯಲ್ಲಿ ಮಹಿಳೆ ತನ್ನ ಪತಿಯನ್ನು ಕೊಲ್ಲಲು ಆಯ್ಕೆ ಮಾಡಿದ್ದು ಕರೆಂಟ್ ಶಾಕ್.
ರಾಜಸ್ಥಾನದ ಬಿಕನೇರ್ ಬಳಿ ಚುರು ಸಮೀಪ ಕುಡುಕ ಗಂಡನ ಹಿಂಸೆ ತಾಳಲಾರದೆ ಗೃಹಿಣಿಯೊಬ್ಬಳು ಕರೆಂಟ್ ಶಾಕ್ ನೀಡಿ ಕೊಲೆಗೆ ಯತ್ನಿಸಿದ್ದಾಳೆ. ಬಳಿಕ ಭಯಗೊಂಡು ಕೂಗಾಡಿ ಪೇಚಿಗೆ ಸಿಲುಕಿದ್ದಾಳೆ.
ಸುಮಾರು 32 ವರ್ಷ ಪ್ರಾಯದ ಮಹೇಂದ್ರ ಎಂಬಾತ ಕುಡಿದು ಮನೆಗೆ ಬಂದು ದಾಂದಲೆ ನಡೆಸುತ್ತಿದ್ದ. ಈತನ ವರ್ತನೆಯಿಂದ ಬೇಸತ್ತ ಪತ್ನಿ ಈ ಹಿಂಸೆಯಿಂದ ಶಾಶ್ವತ ಮುಕ್ತಿ ಪಡೆಯಲು ಯೋಚಿಸಿ ಕೊಲೆಗೆ ಸಂಚು ರೂಪಿಸಿದ್ದಾಳೆ. ಆಗಸ್ಟ್ 12 ರಂದು ರಾಾತ್ರಿ ಊಟದಲ್ಲಿ ಮತ್ತುಬರುವ ಔಷಧಿ ನೀಡಿದ್ದಾಳೆ. ಪತಿ ಮಲಗಿದ ಸಂದರ್ಭದಲ್ಲಿ ಕಾಲಿಗೆ ವೃರ್ ಕಟ್ಟಿದ್ದಾಳೆ.
ಆದರೆ ಆಕೆ ಕರೆಂಟ್ ಶಾಕ್ ಕೊಟ್ಟು, ಕೊಲ್ಲುವ ಮುನ್ನವೇ ಮನೆಯವರಿಗೆ ವಿಷಯ ಗೊತ್ತಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಸಂಬಂಧ ಮನೆಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಆ ವೇಳೆ ಹೇಳಿಕೆ ನೀಡಿರುವ ಮಹೇಂದ್ರನ ಪತ್ನಿ, ತನ್ನ ಕುಡುಕ ಗಂಡ ನಿತ್ಯ ಕುಡಿದು ಹಿಂಸೆ ನೀಡುತ್ತಿದ್ದ. ಈ ಹಿಂಸೆ ತಾಳಲಾರದೆ ಕರೆಂಟ್ ಶಾಕ್ ಕೊಟ್ಟು ಸಾಯಿಸುವ ಪ್ರಯತ್ನ ಮಾಡಿದ್ದಾಗಿ ತಿಳಿಸಿದ್ದಾಳೆ.
ಸದ್ಯ ಸಾವಿನಿಂದ ಪಾರಾಗಿರುವ ಮಹೇಂದ್ರ ಬಿಕನೇರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಪತ್ನಿಯು ಕೇಸ್ ಎದುರಿಸುವಂತಾಗಿದೆ.