ಚಿಕ್ಕಮಗಳೂರು: ರಾಜ್ಯ ರಾಜಕೀಯ ಕುತೂಹಲಕಾರಿ ಸನ್ನಿವೇಶಕ್ಕೆ ಸಾಕ್ಚಿಯಾಗುತ್ತಿದೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಬೇಕೆಂಬ ಸಲಹೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ದ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ನಡುವೆ ಸಿ.ಟಿ.ರವಿ ತವರು ಚಿಕ್ಕಮಗಳೂರಿನಲ್ಲಿ ಇಂದು ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಕೋಲಾಹಲಕ್ಕೆ ಕಾರಣವಾಯಿತು.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಸ್ತಾಪ ಮಾಡಿದ್ದ ಸಿ.ಟಿ.ರವಿ ಬಗ್ಗೆ ಕಾಂಗ್ರೆಸ್ ನಾಯಕರು ಅಪಹಾಸ್ಯ ಮಾಡಿದ್ದರು. ಇದಕ್ಕೆ ಎದಿರೇಟು ನೀಡಿರುವ ಸಿ.ಟಿ.ರವಿ, ನೆಹರೂ ಕುಟುಂಬದ ಹೆಸರನ್ನು ರಾಜಕೀಯ ಉದ್ದೇಶದಿಂದ ಬಳಕೆಮಾಡುವುದು ಸರಿಯಲ್ಲ ಎಂದಿದ್ದರಲ್ಲದೆ, ಕಾಂಗ್ರೆಸ್ ಕಚೇರಿಯಲ್ಲಿ ಬೇಕಿದ್ದರೆ ನೆಹರೂ ಹೆಸರಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂದಿದ್ದರು. ಇದರಿಂದ ಕುಪಿತರಾಗಿರುವ ಕಾಂಗ್ರೆಸ್ ಕಾರ್ಯಕರ್ತರು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿರುವ, ಸಿ.ಟಿ.ರವಿ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು.
ಸಿ.ಟಿ.ರವಿ ಚಿಕ್ಕಮಗಳೂರಿನ ನಿವಾಸಕ್ಕೆ ಮುತ್ತಿಗೆ ಹಾಕಲು ಮೆರವಣಿಗೆಯಲ್ಲಿ ತೆರಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ದಾರಿ ಮಧ್ಯೆ ತಡೆದರು. ಸಿಟಿ ರವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ರಸ್ತೆ ಮಧ್ಯೆ ಹಗ್ಗ, ಬ್ಯಾರಿಕೇಡ್ ಹಾಕಿ ತಡೆದ ಪೊಲೀಸರು ನಂತರ ಬಂಧಿಸಿದ್ದಾರೆ.

ಸಿ.ಟಿ.ರವಿ ಪತ್ನಿಯಿಂದ ರಾಖಿ ಅಸ್ತ್ರ..!
ಇನ್ನೊಂದೆಡೆ ತಮ್ಮ ಪತಿಯ ಬೆಂಬಲಕ್ಕೆ ನಿಂತಿರುವ ಸಿ.ಟಿ.ರವಿ ಪತ್ನಿ ಪಲ್ಲವಿ, ತಮ್ಮ ಮನೆಗೆ ಮುತ್ತಿಗೆ ಹಾಕಲು ಬರುವ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಖಿ ಕಟ್ಟಲು ಸಜ್ಜಾಗಿ ನಿಂತಿದ್ದರು. ನಾಳೆ ಸೋದರತೆಯ ಹಬ್ಬ ರಕ್ಷಾ ಬಂಧನ ಹಬ್ಬಕ್ಕೆ ರವಿ ಮನೆಯವರು ಸಿದ್ದತೆ ನಡೆಸಿದ್ದರು. ಅದರ ಮುನ್ನಾ ದಿನವೇ ಕೈ ಕಾರ್ಯಕರ್ತರ ಪ್ರತಿಭಟನೆಯ ಸುದ್ದಿ ಕೇಳಿಬಂತು. ಹಾಗಾಗಿ ರವಿ ಪತ್ನಿ ಸಜ್ಜಾಗಿ ನಿಂತಿದ್ದರು. ಬಿಜೆಪಿ ಕಾರ್ಯಕರ್ತರೂ ರವಿ ಮನೆ ಮುಂದೆ ಜಮಾಯಿಸಿದ್ದರು.
ಈ ಕುರಿತಂತೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ತಮ್ಮ ವಿರುದ್ದ ಪ್ರತಿಭಟನೆ ನಡೆಸಲು ಮನೆಗೆ ಬರುವ ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮ ಪತ್ನಿ ರಾಖಿ ಕಟ್ಟಿ ಸಿಹಿ ತಿನ್ನಿಸಲಿದ್ದಾರೆ ಎಂದರು.