ಬೆಂಗಳೂರು: ಸಂಘದ ಹಿರಿಯರಾದ, ವಿಶ್ವಹಿಂದೂ ಪರಿಷತ್ತಿನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಕೇಶವ ಹೆಗಡೆ ಅವರ ನಿಧನದ ಬಗ್ಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಿ.ಟಿ.ರವಿ ದುಃಖ ವ್ಯಕ್ತಪಡಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ಜೊತೆ ಜೊತೆಗೆ ದತ್ತಪೀಠದ ಹೋರಾಟದಲ್ಲೂ ಕೇಶವ ಹೆಗಡೆಯವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. 2003 ಹಾಗೂ 2004ರ ಹೋರಾಟದ ಸಮಯದಲ್ಲಿ ಜೈಲುವಾಸವನ್ನು ಅನುಭವಿಸಿ ನಮ್ಮ ಜೊತೆ ಹೋರಾಟದ ಭಾಗವಾಗಿ ಜೊತೆಯಾಗಿ ನಿಂತವರು ಎಂದು ಸಿ.ಟಿ. ರವಿ ನೆನಪಿಸಿಕೊಂಡಿದ್ದಾರೆ.
ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಅಂತಹ ರಾಜ್ಯದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸಂಘಟನೆ ಈ ಮಟ್ಟಿಗೆ ವ್ಯಾಪಿಸಿದೆ ಎಂದರೆ ಅದಕ್ಕೆ ಕಾರಣ ಕೇಶವರು ಎಂದರೆ ತಪ್ಪಾಗಲ್ಲ ಎಂದಿರುವ ರವಿ, ಅವರ ನಿಧನ ಸಂಘಟನೆಗೆ ಹಾಗೂ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ನೋವು ಹಂಚಿಕೊಂಡಿದ್ದಾರೆ.