ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಮಾದರಿಯಲ್ಲೇ ರಾಜ್ಯದಲ್ಲಿ ನಾಲ್ವರು ಗಣ್ಯರ ಕೊಲೆ ನಡೆಯಲಿದೆಯಾ? ಈ ಹತ್ಯಾಕಾಂಡದ ಬೆದರಿಕೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಮೇ 1ಕ್ಕೆ ದುಷ್ಕರ್ಮಿಗಳು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಚಿತ್ರ ನಟ ಶಿವರಾಜ್‌ಕುಮಾರ್, ಪಬ್ಲಿಕ್ ಟಿವಿ ಸಂಪಾದಕ ಎಚ್.ಆರ್.ರಂಗನಾಥ್ ಮತ್ತು ತನ್ನ ಹತ್ಯೆಗೆ ಸಂಚು ನಡೆದಿದೆ ಎಂದು ಲೇಖಕಿ ಬಿಟಿ ಲಲಿತಾ ನಾಯಕ್ ಅವರು ಆತಂಕ ಹೊರಹಾಕಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಲಲಿತಾ ನಾಯಕ್ ಅವರು ತಮ್ಮ ಕೊಲೆ ಮಾಡುವ ಬಗ್ಗೆ ಬೆದರಿಕೆ ಪತ್ರ ಬಂದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈ ಬೆದರಿಕೆ ಕುರಿತಂತೆ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವರಾದ ಬಿ ಟಿ ಲಲಿತಾ ನಾಯಕ್ ಸೇರಿದಂತೆ ಕೆಲವರಿಗೆ ಬೆದರಿಕೆ ಪತ್ರ ಬರೆದಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆ ಬೆದರಿಕೆ ಪತ್ರ ಬರೆದವರ ವಿರುದ್ಧ ಉಗ್ರ ಕ್ರಮ ಜರುಗಿಸುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಂಪೂರ್ಣ ತನಿಖೆ ಮಾಡುತ್ತೇವೆ. ಇದರ ಹಿಂದೆ ಯಾರೇ ಇದ್ದರೂ ಉಗ್ರ ಕ್ರಮ ಜರುಗಿಸುತ್ತೇವೆ ಎಂದು ಸಚಿವರು ಹೇಳಿದರು.