ರಾಯಚೂರು: ಸಂಕಷ್ಟದ ಸಂದರ್ಭದಲ್ಲಿ ಕೋರೋನಾ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿದ ದರವನ್ನೆ ಖಾಸಗಿ ಆಸ್ಪತ್ರೆಗಳು ಪಡೆಯುವ ಮೂಲಕ ಜನರು ಹಾಗೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಕರೆ ನೀಡಿದ್ದಾರೆ.
ರಾಯಚೂರು ನಗರದ ಐಎಂಎ ಸಭಾಂಗಣದಲ್ಲಿ ಮೇ.೮ರ ಶನಿವಾರ ಖಾಸಗಿ ವೈದ್ಯರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ದೇಶ ಹಾಗೂ ರಾಜ್ಯಕ್ಕೆ ವೈದ್ಯಕೀಯ ತುರ್ತಿನ ಸಂಕಷ್ಟದ ಕಾಲ ಎದುರಾಗಿದೆ, ಇಂತಹ ಸನ್ನಿವೇಶದಲ್ಲಿ ಜನ ಸಾಮಾನ್ಯರ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳು ಕೋವಿಡ್-೧೯ಗೆ ಚಿಕಿತ್ಸೆ ನೀಡಲು ದರ ನಿಗಧಿ ಪಡಿಸಿದೆ, ಕೆಲವು ಖಾಸಗಿ ಆಸ್ಪತ್ರೆಗಳು ಅದೇ ದರವನ್ನೇ ಪಡೆಯುತ್ತಿವೆ, ಉತ್ತಮ ಚಿಕಿತ್ಸೆ ನಿಡುತ್ತಿವೆ, ಆದರೆ ಕೆಲವು ಖಾಸಗಿ ಆಸ್ಪತ್ರೆಗಳು ಈ ಸಂದಿಗ್ದ ಪರಿಸ್ಥಿತಿಯ ಲಾಭ ಪಡೆಯುತ್ತಿವೆ ಎನ್ನುವುದು ಕೇಳಿಬಂದಿದ್ದು, ಕೋರೋನಾ ಸೋಂಕಿಗೆ ಚಿಕಿತ್ಸೆ ನೀಡುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಪಡಿಸಿದ ಮೊತ್ತವನ್ನೇ ಪಡೆಯಬೇಕು, ಜನ ಜೀವ ಉಳಿಸುವ ವೈದ್ಯರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದಾರೆ, ಅದಕ್ಕೆ ಚ್ಯುತಿ ಬರಬಾರದು ಎಂದರು.
ಕೊರೋನಾ ನಿಯಂತ್ರಣಕ್ಕೆ ಇಂಜೆಕ್ಷನ್, ಆಕ್ಸಿಜನ್ ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗುವುದು, ರಾತ್ರಿ ಹನ್ನೆರಡಾದರೂ ಖಾಸಗಿ ಆಸ್ಪತ್ರೆಗಳ ಅಗತ್ಯತೆಗಳನ್ನು ಈಡೇರಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಸಿದ್ದವಿದೆ, ಈ ವಿಷಮ ಸನ್ನಿವೇಶದಲ್ಲಿ ಯುದ್ದೋಪಾದಿಯಲ್ಲಿ ರೋಗಿಗಳನ್ನು ಉಪಚರಿಸಿ, ರೋಗದಿಂದ ಗುಣಪಡಿಸಬೇಕು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ಈ ಸಂದರ್ಭದಲ್ಲಿ ಜನರ ವಿಶ್ವಾಸ ಹಾಗೂ ಪ್ರೀತಿ ಗಳಿಸಬೇಕು, ಸರ್ಕಾರ ನಿಗಧಿ ಪಡಿಸಿದ ದರದಂತೆ ರೋಗಿಗಳಿಂದ ಚಿಕಿತ್ಸೆಯ ವೆಚ್ಚ ಪಡೆಯಬೇಕು, ಮಾನವೀಯತೆಯೂ ಮುಖ್ಯ, ದಯಾಳುಗಳಾದ ವೈದ್ಯರು ಯಾರೇ ಬಡವರು ಬಂದರೂ ಅವರಿಗೆ ಚಿಕಿತ್ಸೆ ನಿಡಿದ್ದಲ್ಲೀ, ಜೀವನ ಪರ್ಯಾಂತ ಸ್ಮರಿಸುವರು, ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ತುಮಕೂರಿನ ತಿಪಟೂರಿನ ವೈದ್ಯರು, ರೋಗಿಗಳಿಗೆ ಉಪಚರಿಸುವ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ, ಅವರು ರಾಜ್ಯದ ಜನರು ಅಭಿನಂಧನೆಗೆ ಪಾತ್ರರಾಗಿದ್ದಾರೆ, ಜಿಲ್ಲೆಯ ವೈದ್ಯರು ಕೂಡ ಅದೇ ಸಾಲಿಗೆ ಸೇರಬೇಕು ಎಂದು ತಿಳಿಸಿದರು.
ಮುಂದಿನ ಒಂದು ತಿಂಗಳು ಕಷ್ಟದಾಯಕವಾಗಲಿದ್ದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಹಕರಿಸಬೇಕು, ಅದರಲ್ಲಿ ಯಶಸ್ವಿಯಾಗೋಣ, ಶ್ರದ್ದೆಯಿಂದ ಸೇವೆ ಮಾಡುತ್ತಿದ್ದೀರಿ, ಇನ್ನೂ ಹೆಚ್ಚಿನ ಸೇವೆ ಮಾಡಿ. ಸಹಕಾರ ನೀಡಿ. ಜನರಿಗೆ ಸಕಾಲ ಚಿಕಿತ್ಸೆ ನೀಡಿ ಮಾದರಿಯಾಗುವಂತೆ ಅವರು ಮನವಿ ಮಾಡಿದರು.
ಕೊರೋನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ವೈದ್ಯರು ಮಾಡಬೇಕಾಗಿದೆ. ಬೇರೆ ಜಿಲ್ಲೆಗಳನ್ನು ಗಣನೆಗೆ ಪರಿಗಣಿಸಿದರೆ, ಇಲ್ಲಿನ ವೈದ್ಯರ ಸೇವೆ ಶ್ಲಾಘನೀಯವಾಗಿದೆ, ಬೇರೆ ಜಿಲ್ಲೆಗಳಲ್ಲಿಯೂ ಇಲ್ಲಿನ ಉತ್ತಮ ಚಿಕಿತ್ಸೆಯ ಕುರಿತು ಮಾತುಗಳು ಕೇಳಿಬಂದಿದ್ದು, ಆ ಬಗ್ಗೆ ಹೆಮ್ಮೆ ಇದೆ ಎಂದರು.