ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಕೋವಿಡ್ ಕರ್ಮಕಂಡ ಇದೀಗ ಕಾಂಗ್ರೆಸ್-ಬಿಜೆಪಿ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಉಪಚುನಾವಣಾ ಹೊತ್ತಲ್ಲೇ ಕೋವಿಡ್ ಹಗರಣವನ್ನು ಮುಂದಿಟ್ಟು ಬಿಜೆಪಿ ನಾಯಕರ ಓಟವನ್ನು ಕಟ್ಟಿಹಾಕುತ್ತಿರುವ ಕಾಂಗ್ರೆಸ್ ಮುಖಂಡರು ಹಿಂದಿನ ಸರ್ಕಾರದ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹೆಣಗಳಿಂದಲೂ ಹಣ ಮಾಡಿರುವ ಹಿಂದಿನ ಸರ್ಕಾರವು, ಪ್ರಧಾನಿ ಮೋದಿ ಆದೇಶಕ್ಕೂ ಬೆಲೆಕೊಟ್ಟಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹಗರಣದ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಿಯಾಂಕ್ ಖರ್ಗೆ, ಕೊರೋನ ಸಮಯದಲ್ಲಿ ಯಡಿಯೂರಪ್ಪ ಹಾಗೂ ಶ್ರೀ ರಾಮುಲು ಅವರು ಹೆಣದ ಮೇಲೆ ಹೇಗೆ ಹಣ ಮಾಡಿದರು ಎಂಬುದನ್ನು ಜಸ್ಟೀಜ್ ಕುನ್ಹಾ ಅವರ ಕೊರೋನ ಮಧ್ಯಂತರ ವರದಿಯಲ್ಲಿದೆ. ಈ ಮಧ್ಯಂತರ ವರದಿಯಲ್ಲಿ ಸುಮಾರು 700 ಕೋಟಿ ಹಗರಣದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸುಮಾರು 3 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಗರಣ ನಡೆದಿದೆ ಎಂದರು.
17.03.2020 ರಂದು 416.48 ಕೋಟಿ ಮೊತ್ತದ ಔಷಧಿಗಳು, ಕೆಮಿಕಲ್ ಗಳು, ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಲಾಗುತ್ತದೆ. 18.03.2020 ರಂದು ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಅಗತ್ಯ ವಸ್ತುಗಳ ನಿಗಾವಹಿಸುವ ಸಮಿತಿಯು ನಮಗೆ 12 ಲಕ್ಷ ಪಿಪಿಈ ಕಿಟ್ ಗಳು ಬೇಕು ಎಂದು ತೀರ್ಮಾನ ಮಾಡಿ ಒಂದು ಕಿಟ್ ಗೆ ₹ 2,117.53 ಎಂದು ತೀರ್ಮಾನ ಮಾಡುತ್ತದೆ ಎಂದವರು ವಿವರಿಸಿದರು.
ಪಿಪಿಇ ಕಿಟ್ ಗಳಿಗೆ ಇಷ್ಟೇ ದರವನ್ನು ಏಕೆ ನಿಗದಿ ಮಾಡಲಾಯಿತು? ನಂತರ ಕಾಮರ್ಸ್ ಮತ್ತು ಇಂಡಸ್ಟ್ರಿ ವಿಭಾಗವನ್ನು ಸಂಪರ್ಕಿಸಲಾಗುತ್ತದೆ. ಅವರು ಚೀನಾದಲ್ಲಿ ಬಿಗ್ ಫಾರ್ಮಸಿಟಿಕಲ್ ಮತ್ತು ಡಿಎಚ್ ಬಿ ಫಾರ್ಮಸಿಟಿಕಲ್ ಎನ್ನುವ ಕಂಪನಿಗಳಿಂದ ದರಪಟ್ಟಿಯನ್ನು ನಾವು ತರಿಸಿಕೊಂಡಿದ್ದೇವೆ ಎಂದು ಹೇಳಿದಾಗ. ಇವರು ಯಾವುದೇ ಮುಂದಾಲೋಚನೆ ಮಾಡದೇ, ಇತರಡೆ ದರವನ್ನು ಪರಿಶೀಲನೆ ಮಾಡದೆ ಪಿಪಿಇ ಕಿಟ್ಗಳನ್ನು ಖರೀದಿ ಮಾಡಲಾಗುತ್ತದೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದ ಪ್ರಿಯಾಂಕ್ ಖರ್ಗೆ, ಇದರ ಬಗ್ಗೆ ಅಧಿಕಾರಿಗಳು ಮೂರು ರೀತಿಯ ದರಪಟ್ಟಿ ಬಂದಿದ್ದು ಎಂದು ಹೇಳಿದಾಗ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಅಧಿಕಾರಿಗಳಿಗೆ ನೀವು ಕಡತವನ್ನು ತಯಾರು ಮಾಡಿ ಮುಂದಿನದು ನಾವು ನೋಡಿಕೊಳ್ಳುತ್ತೇವೆ ಎಂದು ಸೂಚನೆ ನೀಡುತ್ತಾರೆ ಎಂದರು.
02.04.2020 ರಲ್ಲಿ ಯಡಿಯೂರಪ್ಪ ಅವರು ಡಿಎಚ್ ಬಿ ಹಾಂಕಾಂಗ್ ಗ್ಲೋಬಲ್ ಕಂಪನಿ ಗೆ ಒಂದು 1 ಲಕ್ಷ ಪಿಪಿಇ ಕಿಟ್ ಸರಬರಾಜು ಮಾಡುವಂತೆ ನೇರ ಆದೇಶ ಕೊಡುತ್ತಾರೆ. ಒಟ್ಟು 21.18 ಕೋಟಿ ರೂಪಾಯಿಯಾಯಿತು. ಜೊತೆಗೆ ಇಷ್ಟು ಪ್ರಮಾಣದ ಪಿಪಿಇ ಕಿಟ್ ಗಳನ್ನು ಏಳು ದಿನದ ಒಳಗಾಗಿ ಸರಬರಾಜು ಮಾಡಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎನ್ನುವ ಷರತ್ತನ್ನು ವಿಧಿಸಲಾಗುತ್ತದೆ. ನಂತರ 10.04.2020 ರಂದು ಯಡಿಯೂರಪ್ಪ ಅವರಿಂದ ಮತ್ತೊಂದು ನೇರ ಆದೇಶ ಇದೇ ಡಿಎಚ್ ಬಿ ಕಂಪನಿಗೆ ಮತ್ತೊಮ್ಮೆ 1 ಲಕ್ಷ ಪಿಪಿಇ ಕಿಟ್ ಗಳನ್ನು ಸರಬರಾಜು ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಈ ಬಾರಿ 2,104.53 ರೂಪಾಯಿಗೆ ನೀಡುವಂತೆ ಹೇಳಲಾಗುತ್ತದೆ. ಇದೇ ದಿನದಂದು ಬಿಗ್ ಫಾರ್ಮಸಿಟಿಕಲ್ ಕಂಪನಿ ಅವರಿಗೂ 1 ಲಕ್ಷ ಕಿಟ್ ಗಳನ್ನು ಸರಬರಾಜು ಮಾಡುವಂತೆ ಸೂಚಿಸಲಾಗುತ್ತದೆ. ಇದನ್ನು ರೂ 2,049.84 ಗಳಿಗೆ ನೀಡುವಂತೆ ಸೂಚನೆ ನೀಡಲಾಗುತ್ತದೇ. ಅಂದರೆ 62.57 ಕೋಟಿ ಹಣದ ವಹಿವಾಟು ನಡೆದಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಕರ್ನಾಟಕದಲ್ಲಿ ಹಾಗೂ ಭಾರತದಲ್ಲಿಯೇ ಸ್ಥಳೀಯವಾಗಿ ಪಿಪಿಇ ಕಿಟ್ ಗಳನ್ನು ತಯಾರು ಮಾಡುತ್ತಿದ್ದರೂ ಸಹ ಯಡಿಯೂರಪ್ಪನವರು ಏಕೆ ಚೀನಾದಿಂದ ತರಿಸಿಕೊಂಡರು ಎಂಬುದಕ್ಕೆ ಉತ್ತರವಿಲ್ಲ. ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈ ಕಾರ್ಪೊರೇಷನ್ ಅವರು ವರದಿ ಪ್ರಕಾರ 14.03.2020 ರಂದು ಸುಮಾರು 1.2 ಲಕ್ಷ ಪಿಪಿಇ ಕಿಟ್ ಗಳನ್ನು ರೂ. 330.40 ಗೆ ಅಂದರೆ ಒಂದು ತಿಂಗಳ ಹಿಂದೆಯೇ ಖರೀದಿ ಮಾಡಿತ್ತು. ನಂತರ ಸುಮಾರು 1,900 ರೂಪಾಯಿ ದರ ವ್ಯತ್ಯಾಸದಲ್ಲಿ ಖರೀದಿ ಮಾಡಲಾಗಿದೆ. ಈ ಹಣ ಯಾರ ಜೇಬಿಗೆ ಹೋಯಿತು ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, 24.03.2020 ರಲ್ಲಿ ನಡೆದ ನಡೆದ ಪ್ರಕ್ಯೂರ್ಮೆಂಟ್ ಅಲ್ಲಿ ಸ್ಥಳೀಯ ಸಂಸ್ಥೆ ಇಂಡಸ್ ಬಯೋ ಸೊಲ್ಯೂಷನ್ ಸಂಸ್ಥೆಗೆ ₹656.25 ದರದಲ್ಲಿ ಒಂದು ಪಿಪಿಇ ಕಿಟ್ ದರ ನಿಗದಿ ಮಾಡಲಾಗಿತ್ತು. ಆದರೆ 23.03.2020 ರಂದು ಅಂದ್ರೆ ಹಿಂದಿನ ದಿನ ಸ್ಥಳೀಯ 8 ತಯಾರಿಕಾ ಸಂಸ್ಥೆಗಳಿಂದ ರೂ 1,444.80 ದರಕ್ಕೆ ಪಿಪಿಇ ಕಿಟ್ ಗಳನ್ನು ಒಂದು ದಿನದ ಅಂತರದಲ್ಲಿ ಹೆಚ್ಚು ಅಂತರಕ್ಕೆ ಖರೀದಿ ಮಾಡುತ್ತಾರೆ. ಸ್ಥಳೀಯವಾಗಿ 18 ಲಕ್ಷ ಪಿಪಿಇ ಕಿಟ್ ಗಳು ಲಭ್ಯವಿದ್ದರೂ ಸಹ ಯಡಿಯೂರಪ್ಪನವರ ಸರ್ಕಾರ ಚೀನಾ ಮೂಲದ ಕಂಪನಿಗಳಿಂದ ಹೆಚ್ಚಿನ ಹಣಕ್ಕೆ ಏಕೆ ಖರೀದಿ ಮಾಡಿತು? ಎಂದೂ ಪ್ರಶ್ನೆ ಮಾಡಿದರು.
21 ಕೋಟಿಗೆ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಲಾಗಿರುತ್ತದೆ. ಆಗ ಪೂರೈಕೆದಾರ ಕಂಪನಿಗಳು ಹಾಂಕಾಂಗ್ನಲ್ಲಿ ಲಭ್ಯವಿಲ್ಲದ ಕಾರಣ ಶಾಂಗೆನಿಂದ ತರಿಸಿಕೊಳ್ಳುವುದಾಗಿ ಹೇಳುತ್ತವೆ. ಕೇವಲ ಸಾಗಾಣಿಕ ವೆಚ್ಚವಾಗಿ ಸರ್ಕಾರ 12 ಕೋಟಿ ಖರ್ಚು ಮಾಡುತ್ತದೆ. ಇದು ವಿಪರ್ಯಾಸವಲ್ಲವೇ? ಎಂದು ಪ್ರತಿಪಾದಿಸಿದ ಅವರು, ಪೂರೈಕೆ ದಾರ ಕಂಪನಿಗಳು ತಾವು ಒಪ್ಪಿಕೊಂಡಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ ಮೇಲೆ ಸರ್ಕಾರದಿಂದ ಪಾವತಿಯಾಗಬೇಕು. ಆದರೆ ಯಡಿಯೂರಪ್ಪನವರ ಸರ್ಕಾರ ತಲೆಬುಡವಿಲ್ಲದ ಚೀನಾ ಕಂಪನಿಗೆ ಶೇ.ನೂರರಷ್ಟು ಮುಂಗಡ ಹಣ ಪಾವತಿ ಮಾಡಿದೆ ಎಂದು ಆರೋಪಿಸಿದರು.
2019 ರಲ್ಲಿ ಸ್ಥಾಪನೆಯಾದ ಬಿಗ್ ಹಾಗೂ ಡಿಎಚ್ ಬಿ ಫಾರ್ಮಸಿಟಿಕಲ್ ಕಂಪನಿಗಳಿಗೆ ಕೇವಲ ಒಂದು ವರ್ಷದ ಅಂತರದಲ್ಲಿ ದೊಡ್ಡ ಮೊತ್ತದ ಆದೇಶ ಹೇಗೆ ಸಿಗುತ್ತದೆ. ಪ್ರಸ್ತುತ ನಾನು ಇದರ ಬಗ್ಗೆ ವಿಚಾರಿಸಿದಾಗ, ಪ್ರಸ್ತುತ ಈ ಕಂಪನಿಯ ಅಸ್ತಿತ್ವದಲ್ಲಿ ಇಲ್ಲ. ಕೊರೋನ ಪ್ರಾರಂಭವಾದಾಗ ಈ ಕಂಪನಿಗಳು ಸ್ಥಾಪನೆ ಆಗುತ್ತವೆ ಕರೋನ ಮುಗಿದ ತಕ್ಷಣ ಇವು ಅಸ್ತಿತ್ವ ಕಳೆದುಕೊಳ್ಳುತ್ತವೆ. ಇವು ಯಾರ ಹೆಸರಿನಲ್ಲಿ ನೋಂದಣಿಯಾಗಿವೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ಮೇಕಿಂಗ್ ಇಂಡಿಯಾ ಹೆಸರಿನಲ್ಲಿ ಚೀನಾದಿಂದ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳುತ್ತಾರೆ. ಆದರೆ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು, ಅಮಿತ್ ಶಾ ಅವರ ಆದೇಶವನ್ನು ಉಲ್ಲೇಖಿಸಿ ಎಲ್ಲರಿಗೂ ಆದೇಶವನ್ನು ನೀಡಿರುತ್ತಾರೆ. ಆದರೆ ಯಡಿಯೂರಪ್ಪನವರು ಚೀನಾ ಕಂಪನಿಯಿಂದಲೇ ನೇರವಾಗಿ ಖರೀದಿ ಮಾಡಿದ್ದಾರೆ ಎಂದು ಬೊಟ್ಟು ಮಾಡಿದ ಸಚಿವರು, ಪ್ರಧಾನಿ ಅವರ ಆದೇಶವನ್ನು ಉಲ್ಲಂಘಿಸಿ, ಚೀನಾದಿಂದ ಖರೀದಿ ಮಾಡಲಾಗಿದೆ ಎಂದರೆ ಇದು ದೇಶದ್ರೋಹದ ಕೆಲಸವಲ್ಲವೇ? ಇದೇ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದರೆ, ದೇಶದ್ರೋಹಿಗಳು ಎಂದು ಊಳಿಡುತ್ತಿದ್ದರು. ಬಿಜೆಪಿ ಅವರ ನಿರ್ಲಕ್ಷಿತ ಧೋರಣೆಯಿಂದ ಹೆಚ್ಚು ಜನರು ಸತ್ತಿದ್ದಾರೆ ಹೊರತು, ಕೊರೋನ ರೋಗದಿಂದ ಜನ ಸತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
2020-21 ರ ಸಾವಿನ ವರದಿಗಳನ್ನು ಬಿಜೆಪಿ ಸರ್ಕಾರ ಮುಚ್ಚಿ ಹಾಕಿದೆ. 1.20 ಲಕ್ಷ ಜನರ ತೀರಿ ಹೋಗಿರುವುದನ್ನು ವರದಿ ಸಲ್ಲಿಸಿಲ್ಲ ಎಂದು ಸದನಕ್ಕೆ ತಿಳಿಸಲಾಗಿದೆ ಎಂದು ನೆನಪಿಸಿದ ಪ್ರಿಯಾಂಕ್ ಖರ್ಗೆ, ಡೈರೆಕ್ಟರೇಟ್ ಆಫ್ ಎಕನಾಮಿಕ್ಸ್ ಅಂಡ್ ಸ್ಟಾಟಿಸ್ಟಿಕ್ಸ್, ಭಾರತ ಸರ್ಕಾರ ನೀಡಿರುವ ವರದಿಯಂತೆ 2 ಲಕ್ಷ 29 ಸಾವಿರ ಜನರು2020 ಜನವರಿಯಿಂದ ಜುಲೈ ಅವಧಿಯಲ್ಲಿ ಹಾಗೂ 2021 ರ ಜನವರಿಯಿಂದ ಜುಲೈ ತನಕ 4.26 ಲಕ್ಷ ಜನರು ಸಾವನಪ್ಪಿದ್ದಾರೆ. ಆದರೆ ಬಿಜೆಪಿ ಸರ್ಕಾರ 37,206 ಎಂದು ಸುಳ್ಳು ಹೇಳಿದೆ ಎಂದು ಅಂಕಿ-ಅಂಶ ಒದಗಿಸಿದರು. ಜನರು ಅಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ ಮತ್ತು ದುರಾಸೆಯಿಂದ ಸತ್ತಿದ್ದಾರೆ. ಬಿಜೆಪಿಯವರು ಕೊರೋನ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದ್ದರು. ಇದು ಕೊರೊನಾದಿಂದ ಆಗಿರುವ ಸಾವುಗಳಲ್ಲ ಬಿಜೆಪಿಯ ಹತ್ಯೆ. ಬಿಜೆಪಿಯಿಂದ ಕರ್ನಾಟಕದ ಜನರ ಹತ್ಯಾಕಾಂಡ ನಡೆದಿದೆ. ದುಡ್ಡಿನ ಆಸೆಗೆ ಇದೆಲ್ಲಾ ನಡೆದಿದೆ.
ಈ ಅಂಕಿ-ಅಂಶಗಳನ್ನು ಕಾಂಗ್ರೆಸ್ ಸರ್ಕಾರ ನೀಡಿರುವುದಲ್ಲ, ಬದಲಾಗಿ ಮೋದಿ ಸರ್ಕಾರವೇ ನೀಡಿರುವುದು. ಕಳಪೆ ಮಾತ್ರೆಗಳು, ಕಳಪೆ ವ್ಯಾಕ್ಸಿನ್, ಪಿಪಿಇ ಕಿಟ್ ಹಾಗೂ ಇತರೆ ವೈದ್ಯಕೀಯ ಸಲಕರಣೆಗಳನ್ನು ತಂದು ಜನರ ಜೀವ ತೆಗೆಯಲಾಗಿದೆ. ಅನೇಕ ಮಕ್ಕಳು ತಂದೆ ತಾಯಿಗಳನ್ನು ಕರೆದುಕೊಂಡಿದ್ದಾರೆ. ಕುಟುಂಬದ ಆಧಾರವೇ ಬಿದ್ದು ಹೋಗಿದೆ. ಮಾಧ್ಯಮ ವರ್ಗವೇ ಸಂಕಷ್ಟದಲ್ಲಿದೆ. ಅನೇಕ ಉದ್ದಿಮೆಗಳು ಬಿದ್ದು ಹೋಗಿದ್ದು, ಜನ ಕೆಲಸವಿಲ್ಲದೆ ಅಲೆಯುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.