ಬೆಂಗಳೂರು: ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ ‘ರೂಪಾಂತರಿ’ ತಲ್ಲಣ ಸೃಷ್ಟಿಯಾಗಿದೆ. ಯು.ಕೆ.ಯಿಂದ ಬಂದಿರುವ 75 ಮಂದಿ ಹಾಗೂ ಸಂಪರ್ಕಿತರ ಪೈಕಿ 37 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 11 ಮಂದಿಗೆ ಮಾತ್ರ ರೂಪಾಂತರಗೊಂಡ ಕೊರೊನಾ ಬಂದಿದೆ. 17 ಮಂದಿ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ. ರೂಪಾಂತರಗೊಂಡ ಸೋಂಕು ಬಂದವರ ಸಂಖ್ಯೆ ಏರಿಕೆಯಾಗಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಯು.ಕೆ.ಯಿಂದ ಬಂದ ಉಳಿದವರ ಸಂಪರ್ಕ ಪತ್ತೆ ಮಾಡಲು ಸೂಚಿಸಲಾಗಿದೆ. ಅದೇ ರೀತಿ ಬಿಬಿಎಂಪಿ ಆಯುಕ್ತರೊಂದಿಗೂ ಚರ್ಚಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಉಳಿದವರ ಸಂಪರ್ಕ ಪತ್ತೆಯಾಗಲಿದೆ ಎಂದರು.
ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು, ಶಿಕ್ಷಕರಿಗೆ ಕೊರೊನಾ ಬಂದಿರುವ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ನಿಖರವಾಗಿ ಮಾಹಿತಿ ಪಡೆಯಲಾಗುವುದು. ಆದರೆ ಗಾಬರಿಯಾಗುವಂತಹ ವರದಿಯೇನೂ ಬಂದಿಲ್ಲ ಎಂದವರು ಹೇಳಿದರು.