ಮುಂಬೈ: ಜಗತ್ತಿನಾದ್ಯಂತ ಕಿಲ್ಲರ್ ಕೊರೋನಾ ವೈರಾಣು ಹಾವಳಿ ದೂರವಾಗಿಲ್ಲ. ಲಕ್ಷಾಂತರ ಜನರನ್ನು ಬಲಿಪಡೆದಿರುವ ಈ ಸೋಂಕು ಇದೀಗ ಪರಿವರ್ತಿತ ವೈರಾಣು ಮೂಲಕ ವಿಶ್ವಾದ್ಯಂತ ತಲ್ಲಣದ ತರಂಗ ಎಬ್ಬಿಸಿದೆ.
ಜಗತ್ತಿನ ವಿವಿಧ ದೇಶಗಳಿಗೆ ಕೊರೋನಾ ಲಸಿಕೆ ಪೂರೈಜೆ ಮಾಡುತ್ತಿರುವ ಭಾರತದಲ್ಲೂ ಈಗ ರೂಪಾಂತರಿ ವೈರಾಣು ಆತಂಕದ ಅಲೆ ಎಬ್ಬಿಸಿದೆ. ಮಹಾರಾಷ್ಟ್ರದಲ್ಲಿ ಎರಡು ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಎರಡು ಜಿಲ್ಲಡಗಳಲ್ಲಿ ವಾರಾಂತ್ಯದ ಲಾಕ್‌ಡೌನ್ ಘೋಷಿಸಲಾಗಿದೆ.
ಅಮರಾವತಿಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಎರಡು ರೂಪಾಂತರಿ ಕೊವಿಡ್-19 ತಳಿ ಪತ್ತೆಯಾಗಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯದ ದಿನಗಳಾದ ಶನಿವಾರ ರಾತ್ರಿ 8 ರಿಂದ ಸೋಮವಾರ ಬೆಳಿಗ್ಗೆ 7 ವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಯಾವತ್ಮಾಲ್ ಜಿಲ್ಲೆಯಲ್ಲೂ ಇದೇ ರೀತಿಯ ತಲ್ಲಣ ಸೃಷ್ಟಿಯಾಗಿದ್ದು, ಅಲ್ಲೂ ಕೋವಿಡ್ ನಿರ್ಬಂಧದ ನಿಯಮ ಅನುಸರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.