ಬೆಂಗಳೂರು: ಇಡೀ ದೇಶವೇ ಇಂದಿರಾ ಅವರನ್ನು ಮನ್ನಿಸಿತ್ತು, ಇನ್ನೆಷ್ಟು ದಿನ ನೀವು ತುರ್ತುಪರಿಸ್ಥಿತಿ ಬಗ್ಗೆ ಮಾತಾಡ್ತೀರಿ ಎಂದು ಬಿಜೆಪಿ ನಾಯಕರನ್ನು ಮಾಜಿ ಶಾಸಕರೂ ಆದ ಕೆಪಿಸಿಸಿ ಸಂವಹನಾ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರು ‘ತುರ್ತು ಪರಿಸ್ಥಿತಿ’ ವಿಚಾರ ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ಟೀಕಿಸಿದ್ದಾರೆ.
1975 ರಲ್ಲಿ ದೇಶದ ಕಾಂಗ್ರೆಸ್ ಪಕ್ಷದ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಜೂನ್ 25 ರಂದು ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ್ದರು. ಪಾರ್ಲಿಮೆಂಟಿನ ಜಂಟಿ ಸಮಿತಿಯ ಬೆಂಗಳೂರಿನ ಸಭೆಗೆ ಆಗಮಿಸಿದ್ದ ಅಂದಿನ ಜನಸಂಘದ ನಾಯಕ ಹಾಗೂ ರಾಜ್ಯಸಭಾ ಸದಸ್ಯರಾದ ಎಲ್.ಕೆ.ಅಡ್ವಾಣಿ ಸಹಿತವಾಗಿ 29 ಲೋಕಸಭಾ ಸದಸ್ಯರನ್ನು ತುರ್ತುಪರಿಸ್ಥಿತಿಯ ಘೋಷಣೆಯ ಕಾರಣಕ್ಕಾಗಿ ಬಂಧಿಸಲಾಗಿತ್ತು. ದೇಶದಲ್ಲಿ 2 ವರ್ಷಗಳ ಕಾಲ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಕಾಂಗ್ರೆಸ್ ಪಕ್ಷದ ಅಂದಿನ ಈ ಕ್ರಮದಿಂದ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿರವರ ಸಹಿತವಾಗಿ ಕಾಂಗ್ರೆಸ್ ಪಕ್ಷ ಸೋಲನ್ನು ಅನುಭವಿಸಿತು. 1980ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಕಾಂಗ್ರೆಸ್ ಪಕ್ಷದ ತಪ್ಪನ್ನು ಮನ್ನಿಸಿ ಇಂದಿರಾ ಗಾಂಧಿ ನಾಯಕತ್ವದಲ್ಲಿ ಜಯವನ್ನು ನೀಡಿದರು. ಆದರೆ ಜನ ಸಂಘದಿಂದ ಬಿಜೆಪಿಯಾಗಿ ಪರಿವರ್ತನೆಗೊಂಡಿರುವ ಬಿಜೆಪಿಗರು ಮಾತ್ರ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾರೆ. ದೇಶದಲ್ಲಿ ಇಂದು ಇರುವ ಅಘೋಷಿತ ಪರಿಸ್ಥಿತಿ ಮತ್ತು ಏಕ ವ್ಯಕ್ತಿಯ ಸರ್ವಾಧಿಕಾರ, ವ್ಯಕ್ತಿ ಪೂಜೆ ಬಿಜೆಪಿಗೆ ಅನಿವಾರ್ಯವಾಗಿದೆ!ಲ ಎಂದು ರಮೇಶ್ ಬಾಬು ಕುಟುಕಿದ್ದಾರೆ.
ಕರ್ನಾಟಕ ವಿಧಾನ ಸಭೆಯ ಅನಿವಾರ್ಯದ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು ರಾಹುಲ್ ಗಾಂಧಿ ರಾಮಲೀಲಾ ಮೈದಾನದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾರಣಕ್ಕೆ ಜನರ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ಬಹುತೇಕ ನಾಯಕರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಪದೇ ಪದೇ ಇಂತಹ ಹೇಳಿಕೆ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತು ಕಾಂಗ್ರೆಸ್ ನಾಯಕರನ್ನು ಟೀಕಿಸಿ ಬೆತ್ತಲೆಯಾಗುತ್ತಾರೆ. ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ರವರು ಅಂದಿನ ತುರ್ತುಪರಿಸ್ಥಿತಿಯ ಕಾರಣಕ್ಕಾಗಿ ಭಾರತದ ಪ್ರಜಾಪ್ರಭುತ್ವದ ಬೇರುಗಳು ಮತ್ತಷ್ಟು ಗಟ್ಟಿಯಾದವು ಎಂದು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಬರಲು ಸಾಧ್ಯವಿಲ್ಲ ಎಂದು ನಾನು ಹೇಳಲು ಆಗುವುದಿಲ್ಲ ಎಂದು ಹೇಳಿರುತ್ತಾರೆ. ಬಿಜೆಪಿಯ ಹಿರಿಯ ನಾಯಕರು ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂದು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದವರು ಹೇಳಿದ್ದಾರೆ.
ಸ್ವಾತಂತ್ರ ಉದ್ಯಾನವನದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ನಡೆಸಿದ ಪೋಸ್ಟರ್ ಅಭಿಯಾನದ ಬದಲು ಬಿಜೆಪಿಗರು ತಮ್ಮ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಮೋದಿ ವ್ಯಕ್ತಿ ಪೂಜೆಯ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಬಹುದಿತ್ತು! ಆರ್.ಅಶೋಕ್ ರವರಿಗೆ ಪೋಸ್ಟರ್‌ಗಳ ಅವಶ್ಯಕತೆ ಇದ್ದಲ್ಲಿ ಕಾಂಗ್ರೆಸ್ ಪಕ್ಷ ಉಚಿತವಾಗಿ ಪೂರೈಕೆ ಮಾಡುತ್ತಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಾನು ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದೆ ಮತ್ತು ಬೆಂಗಳೂರಿನಲ್ಲಿ ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಪ್ರಥಮ ಪಿಯು ಓದುವ 16 ವರ್ಷದ ಅಪ್ರಾಪ್ತ ರನ್ನು ಜೈಲಿನಲ್ಲಿ ಇಡಲು ದೇಶದ ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ! ಇಂತಹ ಹಸಿ ಸುಳ್ಳುಗಳ ಮೂಲಕವೇ ಬಿಜೆಪಿಗರು ರಾತ್ರೊರಾತ್ರಿ ನಾಯಕರಾಗಿರುತ್ತಾರೆ. ಸಂವಿಧಾನವನ್ನು ಉಲ್ಲಂಘನೆ ಮಾಡಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಯಲ್ಲಿ ಇಟ್ಟಿರುವ ಭಾರತೀಯ ಜನತಾ ಪಕ್ಷವಾಗಲಿ ಅಥವಾ ಅದರ ನಾಯಕರಾಗಲಿ 1975ರ ತುರ್ತು ಪರಿಸ್ಥಿತಿಯ ಕುರಿತು ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ವಿಫಲರಾಗಿರುವ ಆರ್.ಅಶೋಕ್ ರವರು ತಮ್ಮ ರಾಜಕೀಯ ಚಟಕ್ಕಾಗಿ ಆಗಾಗ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ರಮೇಶ್ ಬಾಬು ತರಾಟೆಗೆ ತೆಗೆದುಕೊಂಡರು. .























































