ಉಡುಪಿ: ಲೋಕಸಭಾ ಚುನಾವಣಾ ಅಖಾಡದಲ್ಲಿ ನಾಯಕರ ಸವಾರಿ ಬಿರುಸಾಗಿದ್ದು ಸ್ಟಾರ್ ಪ್ರಚಾರಕರಿಂದ ಮತಬೇಟೆ ನಡೆಯುತ್ತಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳ ಮತದಾರರನ್ನು ಸೆಳೆಯಲು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಕರೆತರಲಾರಂಭಿಸಿದ್ದು, ಸ್ಮೃತಿ ಇರಾನಿ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಆಗಮನಕ್ಕೂ ತಯಾರಿ ನಡೆದಿದೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷವೂ ಭರ್ಜರಿ ರಣತಂತ್ರ ರೂಪಿಸಿದ್ದು, ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ಸಹಿತ ನಾಯಕರು ಕ್ಷೇತ್ರಗಳಲ್ಲೇ ಮೊಕ್ಕಾಮ್ ಹೂಡಿ ಕಾರ್ಯಕರ್ತರನ್ನು ಹುರಿದುಂಭಿಸುತ್ತಿರುವ ವೈಖರಿ ಕೂಡಾ ಗಮನ ಸೆಳೆದಿದೆ.
ಬೂತ್ ಮಟ್ಟದಲ್ಲಿ ಕೈ ಸೈನಿಕರಿಗೆ ತರಬೇತಿ:
ಉಡುಪಿ-ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶಿಷ್ಟ ತರಬೇತಿ ಮೂಲಕ ಪ್ರಚಾರಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಶಿವಮೊಗ್ಗ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯೂ ಆಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಅವರು ಬೂತ್ ಕಾರ್ಯಕರ್ತರ ತಾಲೀಮು ನಡೆಸುತ್ತಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಸಹಿತ ವಿವಿಧ ಬೂತ್ ಪ್ರಮುಖರಿಗೆ ವಿಶಿಷ್ಟ ತರಬೇತಿ ನೀಡಲಾಯಿತು. ಸ್ವತಃ ಜಿ.ಎ.ಬಾವಾ ಅವರು ಈ ಮಾರ್ಗದರ್ಶನ ಶಿಬಿರದ ನೇತೃತ್ವ ವಹಿಸಿದ್ದು, ಮಾಜಿ ಶಾಸಕರು ಹಾಗೂ ಪಕ್ಷದ ಜಿಲ್ಲಾ ನಾಯಕರೂ ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ಒದಗಿಸಿದ ಜಿ.ಎ.ಬಾವಾ, ವಂಡ್ಸೆಯಲ್ಲಿ ಸುಮಾರು 130 ಬೂತ್ ಅಧ್ಯಕ್ಷರಿಗೆ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು-ಸದಸ್ಯರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು. ಸ್ಥಳೀಯ ನಾಯಕರನ್ನು ಗುರುತಿಸಿ, ಅವರಿಗೆ ಪ್ರಚಾರ ಹೇಗೆ ನಡೆಸಬೇಕು, ಮತದಾರರ ಪಟ್ಟಿಯಲ್ಲಿರುವ ವ್ಯಕ್ಕ್ತಿಗಳನ್ನು ಹೇಗೆ ತಲುಪಬೇಕು, ಮತದಾರರಿಗೆ ಸರ್ಕಾರದ ಜನಪ್ರಿಯ ಗ್ಯಾರೆಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡುವುದು ಹೇಗೆ, ಬಿಜೆಪಿ ಆಡಳಿತದ ಲೋಪಗಳ ಬಗ್ಗೆ ಜನರಿಗೆ ಯಾವ ರೀತಿ ತಿಳಿಸಬೇಕು ಎಂಬಿತ್ಯಾದಿ ವಿಚಾರಗಳನ್ನು ಹೇಳಿಕೊಡಲಾಯಿತು ಎಂದು ಅವರು ತಿಳಿಸಿದರು. ಪ್ರತೀ ಬೂತ್’ನಲ್ಲಿ 25ಕ್ಕೂ ಹೆಚ್ಚು ಸದಸ್ಯರಿದ್ದು ಪ್ರತೀಯೊಬ್ಬರು ಕನಿಷ್ಠ 250 ಮನೆಗಳ ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಮತಗಳನ್ನು ಸೆಳೆಯಬೇಕೆಂಬ ಬಗ್ಗೆ ವಿಶೇಷ ತರಬೇತಿ ನೀಡಲಾಯಿತು ಎಂದು ಜಿ.ಎ.ಬಾವಾ ತಿಳಿಸಿದರು.