ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಈ ಬಾರಿ ಬಿಜೆಪಿಯನ್ನು ಕಟ್ಟಿಹಾಕಲು ರಣತಂತ್ರ ರೂಪಿಸಿರುವ ಕಾಂಗ್ರೆಸ್ ಪಕ್ಷ ರಾಜ್‌ಕುಮಾರ್ ಮನೆ ಸೊಸೆಯನ್ನು ಕಣಕ್ಕಿಳಿಸಿದೆ.
ಹಿಂದುಳಿದ ವರ್ಗಗಳ ಮತಗಳಿಕೆಯ ಸೂತ್ರಕ್ಕೆ ಮೊರೆಹೋಗಿರುವ ಕಾಂಗ್ರೆಸ್ ಈಡಿಗ-ಬಿಲ್ಲವ, ಹಾಗೂ ಇತರ ಹಿಂದುಳಿದವರನ್ನು ಸೆಳೆಯಲು ಶತಪ್ರಯತ್ನ ನಡೆಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಚುನಾವಣಾ ಉಸ್ತುವಾರಿಯೂ ಆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ ಸೇರಿದಂತೆ ಹಿರಿಯ ನಾಯಕರು ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಲ್ಲೂ, ಬಿಜೆಪಿಗೆ ಹಿರಿಯ ನಾಯಕ ಈಶ್ವರಪ್ಪ ಅವರು ಬಂಡಾಯದ ಸವಾಲೊಡ್ಡಿರುವ ಪರಿಸ್ಥಿತಿಯನ್ನು ಬಳಸಿಕೊಳ್ಳುವ ಪ್ರಯತ್ನ ಈ ಕಾಂಗ್ರೆಸ್ ನಾಯಕರದ್ದು.
ಈ ನಡುವೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಜಿ.ಎ.ಬಾವಾ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರ ನಾಮಪತ್ರ ಸಲ್ಲಿಕೆ ಸಂದರ್ಭದ ಸನ್ನಿವೇಶವೇ ಪಕ್ಷದ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಎಲ್ಲಾ ವರ್ಗಗಳ ಜನರು ಗೀತಾ ಶಿವರಾಜ್ ಕುಮಾರ್ ಬಗ್ಗೆ ಒಲವು ಹೊಂದಿದ್ದು, ಅವರು ಜಯಗಳಿಸುತ್ತಾರೆ ಎಂಬ ಬಗ್ಗೆ ವಿಶ್ವಾಸ ಹೆಚ್ಚಾಗಿದೆ ಎಂದಿದ್ದಾರೆ.
ಬಿಜೆಪಿ ಸರ್ಕಾರದಿಂದ ನಿರೀಕ್ಷಿತ ಸಾಧನೆ ವ್ಯಕ್ತವಾಗಿಲ್ಲ ಎಂದ ಜಿ.ಎ.ಬಾವಾ, ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಯಿಂದಾಗಿ ಜನರಿಗೆ ವಿಶ್ವಾಸ ಹೆಚ್ಚಾಗಿದೆ ಹಾಗಾಗಿ ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.