ಬೆಂಗಳೂರು: ಲಿಂಗಾಯತ, ಒಕ್ಕಲಿಗರಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಆದರೆ ಇದನ್ನು ದೇವೇಗೌಡರು ನಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ವೀರಪ್ಪ ಮೊಯಿಲಿ ದೂರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ವೀರಪ್ಪ ಮೊಯಿಲಿ, ದೇವೇಗೌಡರಿಗೆ ಇದೊಂದು ಅಭ್ಯಾಸ. ಎಲ್ಲಾ ವಿಚಾರಗಳಲ್ಲಿಯೂ ಇದೆ. ಅವರಿಗೆ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಯಾರೂ ಏನೂ ಹೇಳಲು ಹೋಗುವುದಿಲ್ಲ. ಎಲ್ಲಾ ಓಬಿಸಿಗಳು ಎಂದರೆ ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಕೊಟ್ಟಿದ್ದು ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದರು.
ಮೋದಿ ಸರ್ಕಾರ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿದರು, ಆದರೆ ಮಾಡಲಿಲ್ಲ. ಜಿಎಸ್ ಟಿ ಯಿಂದ ಸಣ್ಣ, ಸಣ್ಣ ವ್ಯಾಪಾರಿಗಳು ಸತ್ತು ಹೋಗಿದ್ದಾರೆ. ಜಿಎಸ್ಟಿಯನ್ನು ಪರಾಮರ್ಶಿಸಿ ಏಕರೂಪ ಮಾದರಿ ತರುತ್ತೇವೆ. ಎಂಎಸ್‌ಪಿ ಬಗ್ಗೆ ಬಿಜೆಪಿ ಚಕಾರವೇ ಎತ್ತುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ವೀರಪ್ಪ ಮೊಯಿಲಿ, ಸಣ್ಣ ಕೈಗಾರಿಕೆಗಳು ಇಡೀ ದೇಶದಾದ್ಯಂತ ದಿವಾಳಿಯಾಗಿವೆ. ಅನೇಕ ಜಾಗಗಳು ರಿಯಲ್ ಎಸ್ಟೇಟ್ ಜಾಗಗಳಾಗಿ ಬದಲಾಗಿವೆ. ಕಾಂಗ್ರೆಸ್ ತನ್ನ ಪ್ರನಾಳಿಕೆಯಲ್ಲಿ ಎಂಎಸ್ ಪಿಯ ಬಗ್ಗೆ ಕಾನೂನು ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ ಎಂದರು.
ಭೇಟಿ ಬಚಾವೋ ಭೇಟಿ ಪಡಾವೊ ಎಂದು ಕೇವಲ ಘೋಷಣೆ ಮಾಡಿದ್ದರೆ. 2014 ರ ಈಚೆಗೆ ಸುಮಾರು ಶೇ 34 ರಷ್ಟು ಅಪರಾದ ಮಹಿಳೆಯರ ಮೇಲೆ ಹೆಚ್ಚಾಗಿದೆ ಎಂದ ಅವರು, ಮೇಲಿನ ಅನೇಕ ಕಾರಣಗಳನ್ನು ನೋಡಿದರೆ ಯಾವ ವಿಭಾಗಗಳಿಂದಲೂ ಮೋದಿ ಸರ್ಕಾರಕ್ಕೆ ಬೆಂಬಲವಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ ಎನ್‌ಡಿಎ ಸರ್ಕಾರ ಸಂಪೂರ್ಣವಾಗಿ ತೊಲಗಿ ಹೋಗುವುದು ಎಂದರು.
ಯುವಕರಿಗೆ ಉದ್ಯೋಗವಿಲ್ಲ, ಸಾರ್ವಜನಿಕ ಕೈಗಾರಿಕೆಗಳು ಮುಚ್ಚುತ್ತಿರುವ ಕಾರಣ ಉದ್ಯೋಗ ಸೃಷ್ಟಿಯೇ ಆಗುತ್ತಿಲ್ಲ. ಜಾತಿ ಗಣತಿ ಬಗ್ಗೆ ಮಾತೇ ಆಡುತ್ತಿಲ್ಲ. ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜಾತಿ ಗಣತಿಯನ್ನು ನಿಲ್ಲಿಸಿದ್ದು ಇದೇ ನರೇಂದ್ರ ಮೋದಿ ಸರ್ಕಾರ ಎಂದ ವೀರಪ್ಪ ಮೊಯಿಲಿ, ಇದರಿಂದ ಹಿಂದುಳಿದ, ದಲಿತ ವರ್ಗಗಳಿಗೆ ಅನಾನೂಕೂಲ ಹೆಚ್ಚಾಗಿದೆ. ನಾನು ಸಿಎಂ ಆಗಿದ್ದಾಗ ಚಿನ್ನಪ್ಪ ರೆಡ್ಡಿ ಆಯೋಗ ಮಾಡಿ ಸಣ್ಣ, ಸಣ್ಣ ಸಮುದಾಯಗಳ ಬಗ್ಗೆ ಅಧ್ಯಯನ ಮಾಡಿಸಿದ್ದೆ. ಮೊದಲ ಬಾರಿಗೆ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ನೀಡಿದ್ದು ನಮ್ಮ ಸರ್ಕಾರ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ಶ್ರೀ ರಮೇಶ್ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಮಚಂದ್ರಪ್ಪ, ಕೆಪಿಸಿಸಿ ಕಾನೂನು ವಿಭಾಗದ ಉಪಾಧ್ಯಕ್ಷ ದಿವಾಕರ್ ಉಪಸ್ಥಿತರಿದ್ದರು.