ಬೆಂಗಳೂರು : ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕನ್ನು ಯೋಜನೆಗಳನ್ನು ಈಗಾಗಲೇ ಅನುಷ್ಠಾನಗೊಳಸಿದ್ದು, ಇಂದು 5ನೇ ಗ್ಯಾರಂಟಿ ಯೋಜನೆ ಯುವ ನಿಧಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.
ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂಪಾಯಿ ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿಯನ್ನು ಎರಡು ವರ್ಷಗಳ ಅವಧಿವರೆಗೆ ನೀಡುತ್ತಿದ್ದೇವೆ. ಈ ಮೂಲಕ ಕರುನಾಡಿಗೆ ನಮ್ಮ ಪಕ್ಷ ನೀಡಿದ್ದ ವಾಗ್ದಾನವನ್ನು ಈಡೇರಿಸಿರುವ ಸಂತೃಪ್ತಿ ತಮಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಎಂಬುದು ಬದ್ಧತೆಯ ಪಕ್ಷ ಎಂಬುದನ್ನು ಸಮಸ್ತ ನಾಡಿನ ಜನತೆಗೆ ತೋರಿಸಿಕೊಟ್ಟಿದ್ದೇವೆ. ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ಜನರು ವಿಶ್ವಾಸವನ್ನಿಟ್ಟಿದ್ದಾರೆ, ಆ ವಿಶ್ವಾಸಕ್ಕೆ ನಾವು ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ಅದರ ಭಾಗವೇ ಈ 5ನೇ ಗ್ಯಾರಂಟಿಯಾಗಿದೆ. ಇಂದು ಇದನ್ನು ಜಾರಿ ಮಾಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಇನ್ನು ಹಸಿದವರಿಗೆ ಅನ್ನ ನೀಡುವ ಅನ್ನಭಾಗ್ಯವನ್ನೂ ಅಷ್ಟೇ ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದ್ದೇವೆ. ಆದರೆ, ನಮಗೆ ಈ ಯೋಜನೆ ಮೂಲಕ ತಲಾ 5 ಕೆಜಿ ಅಕ್ಕಿ ಕೊಡಬೇಕು ಎಂಬ ಆಶಯ ಇತ್ತು. ಈ ಸಂಬಂಧ ಕೇಂದ್ರ ಸರ್ಕಾರವನ್ನು ನಾವು ಕೇಳಿದೆವು ಕೂಡ. ಆದರೆ, ಕೇಂದ್ರ ಸರ್ಕಾರ ನಮಗೆ ಅಕ್ಕಿಯನ್ನು ಕೊಡಲು ನಿರಾಕರಣೆ ಮಾಡಿದರು. ಇದರಿಂದ ನಾವೇನೂ ಜಗ್ಗಲಿಲ್ಲ, ಕೊಟ್ಟ ಮಾತಿಗೂ ತಪ್ಪಲಿಲ್ಲ. ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಿದೆವು. ಅನ್ನ ಭಾಗ್ಯ ಯೋಜನೆಯಲ್ಲಿ 1.8 ಕೋಟಿ ಕುಟುಂಬಗಳ 3.92 ಕೋಟಿ ಸದಸ್ಯರಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ ಒಟ್ಟು 170 ರೂ.ಗಳನ್ನು ಪ್ರತಿ ತಿಂಗಳು ನೀಡುತ್ತಿದ್ದೇವೆ. ಇದಕ್ಕಾಗಿ ಮಾಸಿಕವಾಗಿ 646 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದಿಂದ ಖರ್ಚು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗ ನಾವು ನಮ್ಮ ವಾಗ್ದಾನದಂತೆ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆಯನ್ನು ನೀಡುತ್ತಿದ್ದೇವೆ. ಇದು ಕಾಂಗ್ರೆಸ್‌ನ ಕಾರ್ಯವೈಖರಿ ಎಂದು ರಣದೀಪ್ ಸುರ್ಜೇವಾಲ ಹೇಳಿದ್ದಾರೆ.




















































