ಮಂಗಳೂರು: ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಕೊಚಿಮುಲ್) ನೇಮಕಾತಿ ಕರ್ಮಕಾಂದ ತನಿಖೆ ಬಿರುಸುಗೊಂಡಿದೆ. ತನಿಖೆಯ ಅಖಾಡಕ್ಕೆ ಧುಮುಕಿರುವ ಜಾರಿ ನಿರ್ದೇಶನಾಲಯ (ಇಡಿ) ಪ್ರಶ್ನೆ ಪತ್ರಿಕೆ ಮಾರಾಟ ಜಾಲದ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳ ಮೇಲೆ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕರಾವಳಿಗೂ ದೌಡಾಯಿಸಿರುವ ED ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಮಂಗಳೂರಿನಿಂದಲೇ ನೇಮಕಾತಿ ಹಗರಣದ ಜಾಲ ಹರಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳ ಕಚೇರಿಗಳ ಬಗ್ಗೆ ಹದ್ದಿನ ಕಣ್ಣಿಟ್ಟಿದೆ.
ಕೋಣಾಜೆ ಬಳಿ ಇರುವ ವಿಶ್ವ ವಿದ್ಯಾಲಯ ಕಚೇರಿಗೆ ಭೇಟಿ ನೀಡಿರುವ ಇ.ಡಿ.ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆನ್ನಲಾಗಿದೆ. ಪರೀಕ್ಷಾಂಗ ಕುಲಸಚಿವ ಪ್ರೊ.ರಾಜುಕೃಷ್ಣ ಚಲನ್ನವರ್ ಕಚೇರಿ ಮೇಲೆ ಗಮನ ಕೇಂದ್ರೀಕರಿಸಿರುವ ತನಿಖಾ ತಂಡ, ಈ ಕಚೇರಿಯಿಂದ ಮಾಹಿತಿ ಸಂಗ್ರಹಿಸಿದೆ ಎನ್ನಲಾಗಿದೆ. ಕಚೇರಿಯ ಪ್ರಮುಖ ದಾಖಲೆಗಳ ಪರಿಶೀಲನೆ ನಡೆದಿದೆ ಎನ್ನಲಾಗಿದೆ.
ಕೋಚಿಮುಲ್ ನೇಮಕಾತಿ ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಮಾರಾಟವಾಗಿದೆ ಎಂಬ ಆರೋಪ ಕೇಳಿಬಂದಿದ್ದು ಈ ಪ್ರಶ್ನೆಪತ್ರಿಕೆ ಮಾರಟವಾಗಿತ್ತೇ ಎಂಬ ಬಗ್ಗೆ ತನಿಖೆ ಸಾಗಿದೆ. ಈ ಪ್ರಕರಣದಲ್ಲಿ ಶಾಸಕರ ವಿರುದ್ದವೂ ಆಕ್ರೋಶ ವ್ಯಕ್ತವಾಗಿದ್ದು, ಇನ್ನೊಂದೆಡೆ ಮಂಗಳೂರು ವಿಶ್ವವಿದ್ಯಾಲಯಕ್ಕೆ ಇ.ಡಿ. ತಂಡ ಭೇಟಿ ನೀಡಿದ ಬೆಳವಣಿಗೆ ರಾಜಕೀಯ ವಲಯದಲ್ಲೂ ಸಂಚಲನ ಸೃಷ್ಟಿಸಿದೆ.


























































