ಬೆಂಗಳೂರು: ಸಹಕಾರ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗಾಗಿ ಖರೀದಿಸಿರುವ 14 ಹೊಸ ವಾಹನಗಳಿಗೆ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.
ಸಹಕಾರ ಸಂಘಗಳ ಅಪರ ನಿಬಂಧಕರು ಹಾಗೂ ಸಹಕಾರ ಸಂಘಗಳ ಜಂಟಿ ನಿಬಂಧಕರುಗಳಿಗೆ 2006ರಲ್ಲಿ ಟೊಯೋಟಾ ಇಟಿಯೋಸ್ ವಾಹನಗಳನ್ನು ಒದಗಿಸಲಾಗಿತ್ತು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ 1999ರಲ್ಲಿ ಟಾಟಾ ಸುಮೋ ವಾಹನಗಳನ್ನು ಒದಗಿಸಲಾಗಿತ್ತು.
ಈ ವಾಹನಗಳು ಹಳೆಯದಾದ ಕಾರಣ ಕಚೇರಿ ಕಾರ್ಯಕಲಾಪಗಳಲ್ಲಿ, ವಿವಿಧ ಸಹಕಾರ ಸಂಘಗಳಿಗೆ ಭೇಟಿ ನೀಡಲು ಸಾಕಷ್ಟು ತೊಂದರೆ ಆಗುತ್ತಿರುವುದನ್ನು ಮನಗಂಡು ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ನಿಧಿಯಿಂದ ವಾಹನ ಖರೀದಿಸಲಾಗಿದೆ.
ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಾದ 33 ಸಹಕಾರ ಸಂಘಗಳ ಉಪ ನಿಬಂಧಕರುಗಳಿಗೆ ಹೊಸ ವಾಹನಗಳನ್ನು ಒದಗಿಸಲು ಕ್ರಮವಹಿಸಲಾಗುತ್ತದೆ.
ಪ್ರಸ್ತುತ 14 ಹೊಸ ವಾಹನಗಳನ್ನು ಕೇಂದ್ರ ಸರ್ಕಾರದ Gem Portal ಮುಖಾಂತರ ಖರೀದಿ ಮಾಡಲಾಗಿದೆ. ಇದರಿಂದ ಖರೀದಿ ಮೊತ್ತದಲ್ಲಿ ಸಾಕಷ್ಟು ಹಣ ಉಳಿತಾಯವಾಗಿದೆ ಎಂದು ಸಹಕಾರ ಇಲಾಖೆ ತಿಳಿಸಿದೆ.