ಬೆಂಗಳೂರು; ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್’ನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಅನಿರ್ಧಿಷ್ಟಾವಧಿ ಧರಣಿ ಅಂತ್ಯಗೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ಭರವಸೆ ಹಿನ್ನೆಲೆಯಲ್ಲಿ ಹೋರಾಟವನ್ನು ಅಂತ್ಯಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (AIUTUC) ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಮಧ್ಯಪ್ರವೇಶದಲ್ಲಿ 10,000 ಮಾಸಿಕ ಗೌರವ ಧನ ನಿಗದಿ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆ ಭರವಸೆಯು ಆಶಾಗಳ ಅನಿರ್ದಿಷ್ಟಾವಧಿ ಹೋರಾಟಕ್ಕೆ ದೊರೆತ ಅಭೂತಪೂರ್ವ ಯಶಸ್ಸು ಎಂದವರು ಹೇಳಿದ್ದಾರೆ. ಮಾಸಿಕ ರೂ.10,000 ನಿಶ್ಚಿತ ಗೌರವಧನದ ಜೊತೆಗೆ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಪ್ರೋತ್ಸಾಹಧನ ದೊರೆಯುವ ಖಾತ್ರಿ, ನಿವೃತ್ತಿ ಪರಿಹಾರ ನೀಡುವ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ, ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಮೂರು ತಿಂಗಳ ವೇತನ ಸಹಿತ ರಜೆ ಕುರಿತು ಪರಿಶೀಲನೆ ಸಹಿತ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಭರವಸೆ ನೀಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಆಶಾ ಸಂಘದ ಮುಖಂಡರೊಂದಿಗೆ ಸಿದ್ದರಾಮಯ್ಯ ಅವರು ಸಂಧಾನ ಸಭೆ ನಡೆಸಿದರು. ಈ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ.ಸೋಮಶೇಖರ್ ಯಾದಗಿರಿ, ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮತ್ತು ಇತರೆ ಮುಖಂಡರು ಹಾಗೂ ಶಿಕ್ಷಣ ತಜ್ಞರಾದ ವಿ.ಪಿ. ನಿರಂಜನಾರಾಧ್ಯ ಕೂಡಾ ಉಪಸ್ಥಿತರಿದ್ದರು.
ಮುಂಬರುವ ಬಜೆಟ್‌ನಲ್ಲಿಯೂ ಸಾಧ್ಯವಾದಷ್ಟು ಹೆಚ್ಚಳ ಮಾಡಲಾಗುವುದು ಹಾಗೂ ಬಜೆಟ್ ಪೂರ್ವಭಾವಿ ಸಭೆಗೆ ಸಂಘವನ್ನು ಆಹ್ವಾನಿಸಲಾಗುವುದು ಎಂದ ಸಿಎಂ, ಉಳಿದ ಬೇಡಿಕೆಗಳನ್ನು ಇಲಾಖೆಯ ಮಟ್ಟದಲ್ಲಿ ಸಭೆ ನಡೆಸಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಸಿಎಂ ಜೊತೆಗಿನ ಸಭೆಯ ಬಳಿಕ ಆಶಾ ಕಾರ್ಯಕರ್ತೆಯರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿನೀಡಿದ ಆರೋಗ್ಯ ಇಲಾಖೆಯ ಆಯುಕ್ತ ಶಿವಕುಮಾರ್ ಅವರು ಮಾಹಿತಿ ಹಂಚಿಕೊಂಡರು. ಆಯುಕ್ತರು ಪ್ರತಿಭಟನಾ ಸ್ಥಳಕ್ಕೆ ಬಂದು ಘೋಷಿಸಿದ ಬಳಿಕ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಅನಿರ್ದಿಷ್ಟಾವಧಿ ಚಳುವಳಿಯನ್ನು ಹಿಂತೆಗೆದುಕೊಂಡಿದೆ. ಸಿಎಂ ಅವರ ಭರವಸೆ ಹಿನ್ನೆಲೆಯಲ್ಲಿ ಈ ವೇತನ ಹೆಚ್ಚಳವು ಏಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.