ಬೆಂಗಳೂರು: ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಇವತ್ತು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಭೆ ನಡೆದಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ರಾಜ್ಯ ಸಮಿತಿಯಲ್ಲಿ 14 ಜನರಿದ್ದೇವೆ. ಒಟ್ಟು ಚುನಾವಣೆ ನಿರ್ವಹಣೆಗೆ 32 ಸಮಿತಿಗಳನ್ನು ರಚಿಸಿದ್ದು, ಈ ಸಮಿತಿಗಳ ಸಭೆಯನ್ನು ನಡ್ಡಾ ಅವರು ನಡೆಸಿದ್ದಾರೆ. ಒಂದೊಂದು ಸಮಿತಿ ಮಾಡಬೇಕಾದ ಜವಾಬ್ದಾರಿ, ಕರ್ತವ್ಯವನ್ನು ತಿಳಿಸಿದ್ದಾರೆ ಎಂದರು.
ದೇಶದ ಬೇರೆ ಬೇರೆ ಕಡೆ ನಮ್ಮ ಕಾರ್ಯ, ಅದರ ಯಶಸ್ಸಿನ ಕುರಿತು ತಿಳಿಸಿದ ಅವರು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಚುನಾವಣೆ ನಿರ್ವಹಿಸಲು ತಿಳಿಸಿದ್ದಾರೆ. ಕಾನೂನು ಪಾಲನೆ ಜೊತೆ ಚುನಾವಣೆ ಎದುರಿಸಲು ಸಲಹೆ ನೀಡಿದ್ದಾರೆ ಎಂದರು.
ಅವರ ಮಾರ್ಗದರ್ಶನದಂತೆ ಈ ಸಮಿತಿ ಕಾರ್ಯ ನಿರ್ವಹಿಸಲಿದೆ. ಬೂತ್ ಬಲಪಡಿಸುವುದು, ಪ್ರಚಾರ ಕಾರ್ಯ ಹೆಚ್ಚಳ, ಕರಪತ್ರ ಹಂಚಿ ಕೇಂದ್ರ- ರಾಜ್ಯ ಸರಕಾರಗಳ ಸಾಧನೆಯನ್ನು ಮನೆಮನೆಗೆ ತಿಳಿಸುವುದು, ಒಂದೆರಡು ಬಾರಿ ಜನರನ್ನು ಖುದ್ದಾಗಿ ಭೇಟಿ ಮಾಡಲು ಸಲಹೆ ಕೊಟ್ಟಿದ್ದಾರೆ ಎಂದು ವಿವರಿಸಿದರು. ಅವರ ಸಲಹೆಯಂತೆ ನಡೆದು ಜನರನ್ನು ತಲುಪುತ್ತೇವೆ; ಅಲ್ಲದೆ ಕಾನೂನಿನಂತೆ ನಡೆದುಕೊಳ್ಳುವುದಾಗಿ ಅವರಿಗೆ ಭರವಸೆ ಕೊಟ್ಟಿದ್ದಾಗಿ ತಿಳಿಸಿದರು.






















































