ಬೆಂಗಳೂರು: ಚಿಕ್ಕಮಗಳೂರಿನ ಎ.ಐ.ಟಿ. ಸರ್ಕಲ್ ರಾಷ್ಟ್ರೀಯ ಹೆದ್ದಾರಿ ೧೭೩ ರಿಂದ ಪ್ರಾರಂಭವಾಗಿ ಬೇಲೂರು-ಹಾಸನ-ಹೊಳೆನರಸೀಪುರ-ಬಿಳಿಕೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೩೭೩ ಆಗಿ ಮೇಲ್ದರ್ಜೆಗೇರಿಸಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಮೂಲಕ ಚಿಕ್ಕಮಗಳೂರಿನ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.
ಈ ಹಿಂದೆ ಬೇಲೂರಿನಿಂದ ಬಿಳಿಕೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೩೭೩ ಆಗಿ ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ಚಿಕ್ಕಮಗಳೂರಿನಿಂದ ಬೇಲೂರಿನವರೆಗೆ ಸುಮಾರು ೨೫ ಕಿ.ಮೀ. ಕೈಬಿಟ್ಟು ಹೋಗಿತ್ತು, ಸತತ ಪ್ರಯತ್ನದ ಫಲವಾಗಿ ಚಿಕ್ಕಮಗಳೂರು ಎ.ಐ.ಟಿ. ಸರ್ಕಲ್‌ನಿಂದ ಪ್ರಾರಂಭಗೊಂಡು ಬೇಲೂರು-ಹಾಸನ-ಹೊಳೆನರಸೀಪುರ-ಬಿಳಿಕೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೩೭೩ ಆಗಿ ಮೇಲ್ದರ್ಜೆಗೇರಿಸಿ ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿದೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಚಿಕ್ಕಮಗಳೂರು ಶಾಸಕರೂ ಆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಲೋಕೋಪಯೋಗಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಹಸ್ತಾಂತರಿಸಿದ ನಂತರ ಈ ರಸ್ತೆಯ ಅಭಿವೃದ್ಧಿಪಡಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
I wholeheartedly thank Union Highways Minister Shri @nitin_gadkari for sanctioning the highway starting from its junction with NH-173 near Chikkamagaluru connecting Belur, Hassan, Holenarasipura and terminating at its junction with NH-275 near Bilikere.
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) September 23, 2022
ಈ ರಸ್ತೆ ಅಭಿವೃದ್ಧಿಪಡಿಸುವುದರಿಂದ ಚಿಕ್ಕಮಗಳೂರಿನಿಂದ ಬೆಂಗಳೂರು ಹಾಗೂ ಮೈಸೂರಿಗೆ ಸಂಚಾರ ಇನ್ನಷ್ಟು ಸುಗಮವಾಗಲಿದೆ. ನಮ್ಮ ಮನವಿಗೆ ಸ್ಪಂದಿಸಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಜಿಲ್ಲೆಯ ಜನತೆಯ ಪರವಾಗಿ ಶಾಸಕ ಸಿ.ಟಿ. ರವಿಯವರು ಕೃತಜ್ಞತೆ ಸಲ್ಲಿಸಿದ್ದಾರೆ.


















































