ಚಿಕ್ಕಬಳ್ಳಾಪುರ: ಶಿವಮೊಗ್ಗ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದೆ.
ಗಣಿಗಾರಿಕೆ ಸ್ಥಳದಲ್ಲಿ ಸ್ಪೋಟ ಸಂಭಬಿಸಿ ಸ್ಥಳದಲ್ಲೇ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕು ಹಿರೇನಾಗವಲ್ಲಿ ಗ್ರಾಮದ ಬಳಿ ಘಟನೆ ಸಂಭವಿಸಿದ್ದು, ಸ್ಪೋಟದ ತೀವ್ರತೆಗೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮೃತರನ್ನು ಇಂಜಿನಿಯರ್ ಉಮಾಕಾಂತ್, ಸ್ಥಳೀಯ ನಿವಾಸಿ ರಾಮು, ವಾಚ್ ಮೆನ್ ಮಹೇಶ್, ಗಂಗಾಧರ್, ಕಂಪ್ಯೂಟರ್ ಅಪರೇಟರ್ ಮುರಳಿ ಎಂದು ಗುರುತಿಸಲಾಗಿದೆ. ಟಾಟಾ ಏಸ್ ಚಾಲಕ ರಿಯಾಜ್ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭ್ರಮರಾ ವಾಸಿನಿ ಸ್ಟೋನ್ ಲಿಮಿಟೆಡ್ ಸೇರಿದ ಜೆಲ್ಲಿ ಕ್ರಷರ್ ಇದಾಗಿದ್ದು, ಸ್ಫೋಟ ಸಂಭವಿಸಿದ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದರು.
ಸ್ಪೋಟಕ ವಸ್ತುಗಳ ಬಳಕೆ ಸಂಬಂಧ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ತಿಂಗಳ 7ರಂದು ಭ್ರಮರಾವಾಸಿನಿ ಗಣಿಗಾರಿಕೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗಣಿ ಸ್ಪೋಟಕ ವಿಚಾರದಲ್ಲಿ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೆ ಈ ಎಚ್ಚರಿಕೆಯಿಂದ ಪರಯೋಜನವಾಗಿಲ್ಲ. ಭೀಕರ ದುರಂತ ಆರು ಮಂದಿಯನ್ನು ಬಲಿತೆಗೆದುಕೊಂಡಿದೆ.