ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಬಂಡವಾಳ ಹೂಡಿಕೆಗೆ ಹಲವಾರು ಪ್ರಸ್ತಾವನೆಗಳು ಬಂದಿವೆ. ಈ ಹಿನ್ನಲೆಯಲ್ಲಿ ಜಿಲ್ಲೆಗೆ ಇನ್ನೂ ಹೆಚ್ಚಿನ ಬಂಡವಾಳ ಆಕರ್ಷಣೆಗೆ ಹಾಗೂ ಇಲ್ಲಿರುವ ಅವಕಾಶಗಳ ಬಗ್ಗೆ ಪ್ರಚಾರ ಮಾಡುವ ಉದ್ದೇಶದಿಂದ ತಮಿಳುನಾಡಿನ ಕೊಯಮತ್ತೂರು, ತಿರಪೂರ್ ಹಾಗೂ ಕೇರಳ ರಾಜ್ಯಗಳಲ್ಲಿ ರೋಡ್ ಶೋ ಆಯೋಜಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬದನಗುಪ್ಪೆ – ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಸಚಿವ ಜಗದೀಶ ಶೆಟ್ಟರ್, ಚಾಮರಾಜನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೈಗಾರಿಕಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೈಗಾರಿಕೋದ್ಯಮಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಿಫುಲ ಅವಕಾಶಗಳು ಇವೆ. ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಸಮೀಪವಾಗಿರುವ ಈ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹಲವಾರು ಪ್ರಸ್ತಾಪನೆಗಳು ಬಂದಿವೆ. ಈಗಾಗಲೇ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಬದನಗುಪ್ಪೆ – ಕೆಲ್ಲಂಬಳ್ಳಿ ಯಲ್ಲಿ 1400 ಏಕರೆಯಷ್ಟು ಕೈಗಾರಿಕಾ ಪ್ರದೇಶವನ್ನು ಅಭಿವೃದ್ದಿಪಡಿಸಲಾಗಿದೆ. ಈ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುವುದು ಹಾಗೂ ಜಿಲ್ಲೆಯಲ್ಲಿರುವ ಸಂಪನ್ಮೂಲಗಳ ಬಳಕೆಗೆ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದರು.
ಕೇರಳ, ತಮಿಳುನಾಡಿನ ಕೊಯಮತ್ತೂರು, ತಿರುಪೂರ್ ನಲ್ಲಿ ರೋಡ್ ಶೋಗಳನ್ನು ಆಯೊಜಿಸುವುದಾಗಿ ತಿಳಿಸಿದ ಸಚಿವರು, ಹುಬ್ಬಳ್ಳಿಯಲ್ಲಿ ನಡೆಸಿದ ಇನ್‌ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದಿಂದಾಗಿ ಈ ಭಾಗದಲ್ಲಿ ಕೈಗಾರಿಕೆಗಳು ಬಂಡವಾಳ ಹೂಡಿಕೆಗೆ ತೋರಿಸುತ್ತಿರುವ ಒಲವು ಹೆಚ್ಚಾಗಿರುವುದನ್ನು ವಿವರಿಸಿದರು.
ಕರೋನಾ ಕಾಲದಲ್ಲೂ ಕೂಡಾ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಹರಿವು ಹೆಚ್ಚಾಗಿದೆ. ಇದರಿಂದ ಉದ್ಯೋಗಾವಕಾಶಗಳು ಕೂಡಾ ಹೆಚ್ಚಾಗುತ್ತಿವೆ. ಕರ್ನಾಟಕ ಮೊದಲಿನಿಂದಲೂ ಕೈಗಾರಿಕಾ ಸ್ನೇಹಿ ರಾಜ್ಯವಾಗಿದೆ. ಇದೀಗ ವಿದೇಶಿ ಬಂಡವಾಳವನ್ನು ಆರ್ಕಷಿಸುವಲ್ಲಿ ಪ್ರ ಮಖ ರಾಜ್ಯವಾಗಿ ಹೊರಹೊಮ್ಮಿದೆ. ನೂತನ ಕೈಗಾರಿಕಾ ನೀತಿಯಲ್ಲಿ ನಾವು ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ನೀಡಿದ್ದೇವೆ. ಹಾಗೂ ಇತ್ತೀಚಿನ ಭೂಸುಧಾರಣಾ ಕಾಯ್ದೆಗಳು ಹಾಗೂ ಕೈಗಾರಿಕಾ ಸೌಲಭ್ಯ ಅಧಿನಿಯಮದಿಂದಾಗಿ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಬಹಳ ಸುಲಭವಾಗಿದೆ ಎಂದರು.
ಎಮ್‌ಎಸ್‌ಎಂಇ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು:
ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು ಎನ್ನುವ ಸಲಹೆಗೆ ಸೂಕ್ತವಾಗಿ ಸ್ಪಂದಿಸಿದ ಸಚಿವರು. ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಹಾಗೂ ಜಿಲ್ಲೆಯ ಇನ್ನಿತರೆ ಭಾಗಗಳಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು. ಹೆಚ್ಚಿನ ಉದ್ಯೋಗಗಾವಕಾಶ ಇರುವ ಸಣ್ಣ ಬಂಡವಾಳದಲ್ಲಿ ಪ್ರಾರಂಭಿಸಬಹುದಾದ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
45 ದಿನಗಳಲ್ಲಿ ನೀರು ಸರಬರಾಜು ವ್ಯವಸ್ಥೆ:
ಚಾಮರಾಜ ನಗರದ ಹೊರ ವಲಯದ ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕ ಪ್ರದೇಶ ಅಭಿವೃದ್ದಿಗೆ ಸಂಬಂಧಿಸಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಬಾಕಿ ಉಳಿಸಬಾರದು. ಇದು ಬಂಡವಾಳ ಹೂಡಿ ಕೈಗಾರಿಕೆಗಳನ್ನು ಪ್ರಾರಂಭಿಸುವವರಿಗೆ ತೊಂದರೆ ಉಂಟುಮಾಡುತ್ತದೆ. ಬದನಗುಪ್ಪೆ – ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಕಾಮಗಾರಿಯನ್ನು 45 ದಿನದೊಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಇದೇ ಸಂಧರ್ಭದಲ್ಲಿ ಗಡುವು ನೀಡಿದರು.