ಬೆಂಗಳೂರು: ಲೋಕಸಭೆ ಚುನಾವಣೆ ಪೈಕಿ ಮೊದಲ ಹಂತದ ಮತದಾನ ನಡೆಯುವ ಕರ್ನಾಟಕದ 14 ಕ್ಷೇತ್ರಗಳಲ್ಲಿ 211 ಪಕ್ಷೇತರರು ಸೇರಿದಂತೆ ಒಟ್ಟು 358 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ವರದಿಯಂತೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ ಮುಗಿಯುತ್ತಿದ್ದಂತೆ ಗುರುವಾರ ಕೊನೆಯ ಗಳಿಗೆಯಲ್ಲಿ ಸಲ್ಲಿಕೆಯಾಗಿರುವ ಉಮೇದುವಾರಿಕೆ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 333 ಪುರುಷ ಅಭ್ಯರ್ಥಿಗಳು ಮತ್ತು 25 ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ 49 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 43 ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ 40 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಜೆಡಿ-ಎಸ್ ಮತ್ತು ಸಿಪಿಐ-ಎಂ ಅಭ್ಯರ್ಥಿಗಳ ಜೊತೆಗೆ 211 ಮಂದಿ ಸ್ವತಂತ್ರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.