ವಿಜಯಪುರ: ಪ್ರತಿಷ್ಠಿತ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಲ್ಲಿ ಕಿರಿಯ ಸಹಾಯಕರು ಹಾಗೂ ಸಿಪಾಯಿ/ವಾಹನ ಚಾಲಕರ ಹುದ್ದೆಗಳಿಗೆ ನೇಮಕಾತಿ ನಡೆಸಲು ಅಧಿಸೂಚನೆ ಪ್ರಕಟಿಸಲಾಗಿದೆ. ಸಹಕಾರ ಸಂಘಗಳ ಜಂಟಿ ನಿಬಂಧಕರು, ಪಟ್ಟಣ ಬ್ಯಾಂಕುಗಳ ವಿಭಾಗ, ಕರ್ನಾಟಕ ರಾಜ್ಯ, ಬೆಂಗಳೂರು ಇವರ ಅನುಮೋದನೆ ಮೇರೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬ್ಯಾಂಕ್‌ನಲ್ಲಿ ಕಿರಿಯ ಸಹಾಯಕರು ಮತ್ತು ಚಾಲಕರ ಹುದ್ದೆಗಳು ಲಭ್ಯವಿವೆ. ಕಿರಿಯ ಸಹಾಯಕರಿಗೆ ₹27,650–52,650 ವೇತನಮಾನ ನಿಗದಿಪಡಿಸಲಾಗಿದ್ದು, ಚಾಲಕರಿಗೆ ₹19,950–37,900 ವೇತನಮಾನ ನೀಡಲಾಗುತ್ತದೆ. ರಾಜ್ಯ ಸರ್ಕಾರ ಕಾಲಕಾಲಕ್ಕೆ ಮಂಜೂರು ಮಾಡುವ ತುಟ್ಟಿ ಭತ್ಯೆ ಹಾಗೂ ಇತರೆ ಭತ್ಯೆಗಳು ಬ್ಯಾಂಕಿನ ಆರ್ಥಿಕ ಸ್ಥಿತಿ ಮತ್ತು ಆಡಳಿತ ಮಂಡಳಿಯ ಅನುಮೋದನೆ ಒಳಪಟ್ಟು ನೀಡಲಾಗುತ್ತದೆ.
ವಿದ್ಯಾರ್ಹತೆ ಮತ್ತು ವಯೋಮಿತಿ
ಕಿರಿಯ ಸಹಾಯಕರ ಹುದ್ದೆಗೆ ಕರ್ನಾಟಕದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Com/B.Sc/BCA/BBA/BE (CS) ಪದವಿಯಲ್ಲಿ ಕನಿಷ್ಠ ಶೇ.70 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದ್ದು, ಸ್ನಾತಕೋತ್ತರ ಪದವಿ ಹಾಗೂ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ. ಸಿಪಾಯಿ/ವಾಹನ ಚಾಲಕರ ಹುದ್ದೆಗೆ SSLC ಉತ್ತೀರ್ಣ ಅಥವಾ ಅನುತ್ತೀರ್ಣರಾಗಿದ್ದರೂ ಮಾನ್ಯ ಚಾಲನಾ ಪರವಾನಗಿ ಹೊಂದಿರಬೇಕು.
ಅರ್ಜಿಯ ಕೊನೆಯ ದಿನಾಂಕದಂತೆ ಕನಿಷ್ಠ 18 ವರ್ಷ ವಯಸ್ಸಿರಬೇಕು. SC/ST ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, OBC ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ ಮತ್ತು ವಿಧಾನ
ಸಾಮಾನ್ಯ ಹಾಗೂ OBC ಅಭ್ಯರ್ಥಿಗಳು ₹1,000 ಮತ್ತು SC/ST ಅಭ್ಯರ್ಥಿಗಳು ₹500 ಅರ್ಜಿ ಶುಲ್ಕವನ್ನು ಡಿ.ಡಿ. ಮೂಲಕ ಪಾವತಿಸಬೇಕು. ಡಿ.ಡಿ. ಅನ್ನು “ವ್ಯವಸ್ಥಾಪಕರು, ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿ., ವಿಜಯಪುರ” ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು. ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಹಿಂತಿರುಗಿಸಲಾಗುವುದಿಲ್ಲ.
ಭರ್ತಿ ಮಾಡಿದ ಅರ್ಜಿಯನ್ನು ಸಿಬ್ಬಂದಿ ನೇಮಕಾತಿ ಸಮಿತಿಯ ಸಂಚಾಲಕರು ಹಾಗೂ ಪ್ರಧಾನ ವ್ಯವಸ್ಥಾಪಕರು, ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿ., ವಿಜಯಪುರ–586101 ಇವರ ಹೆಸರಿನಲ್ಲಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಅಥವಾ ಪ್ರಧಾನ ಕಚೇರಿ (ಮೀನಾಕ್ಷಿ ಚೌಕ, ಮಿರ್ದೆ ಗಲ್ಲಿ, ವಿಜಯಪುರ–586101) ಯಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 4.30ರವರೆಗೆ ಪಡೆಯಬಹುದು.
ಕೊನೆಯ ದಿನಾಂಕ
ಅವಶ್ಯಕ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು 06-03-2026 ರಂದು ಸಂಜೆ 4.30ರೊಳಗೆ ಬ್ಯಾಂಕ್ ಕಚೇರಿಗೆ ಸಲ್ಲಿಸಬೇಕು. ಅವಧಿ ಮೀರಿದ ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಅಭ್ಯರ್ಥಿಗಳು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, SSLC ಅಂಕಪಟ್ಟಿ/ವರ್ಗಾವಣೆ ಪ್ರಮಾಣಪತ್ರ (ವಯೋ ದೃಢೀಕರಣ), ಪದವಿ ಅಂಕಪಟ್ಟಿಗಳು ಹಾಗೂ ಸಂಬಂಧಿತ ಜಾತಿ ಪ್ರಮಾಣಪತ್ರಗಳನ್ನು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿ ಲಗತ್ತಿಸಬೇಕು. ಕನ್ನಡ, ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಓದು-ಬರಹ ಜ್ಞಾನ ಕಡ್ಡಾಯವಾಗಿದೆ. ಸಂದರ್ಶನದ ದಿನಾಂಕವನ್ನು ಪ್ರತ್ಯೇಕವಾಗಿ ತಿಳಿಸಲಾಗುತ್ತದೆ.


























































