ಬೆಂಗಳೂರು: ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ನಿರುದ್ಯೋಗದಿಂದಾಗಿ ಯುವಜನರು ಪರದಾಡುವಂತಾಗಿದೆ. ಇಂತಹಾ ಸಂಧಿಕಾಲದಲ್ಲಿ ಯುವಜನರಿಗೆ ಉದ್ಯಮಶೀಲತೆಯ ಅನುಭವ ಹೆಚ್ಚಿಸಿ ಉದ್ಯೋಗದಾತರನ್ನಾಗಿಸುವ ಪ್ರಯತ್ನಕ್ಕೆ ಬೆಂಗಳೂರಿನ ಪ್ರತಿಷ್ಠಿತ ‘ಚಾಯ್ ಪೀಡಿಯಾ: (chai PEDEA) ಸಂಸ್ಥೆ ಮುಂದಾಗಿದೆ.
ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಮಳಿಗೆಗಳನ್ನು ಆರಂಭಿಸಿರುವ ಕರಾವಳಿ ಮೂಲದ ಯುವಕರಾದ ಆಶಿಕ್, ಮುದಸರ್, ಕಾರ್ತಿಕ್ ಎಂಬವರು, ಯುವಜನರಿಗೆ ಹೊಟೇಲ್ ಉದ್ಯಮದ ಬಗ್ಗೆ ತರಬೇತಿ ನೀಡಿ ಸ್ವ ಉದ್ಯೋಗಕ್ಕೆ ಶಕ್ತರಾಗಿಸುತ್ತಿದ್ದಾರೆ. ಈ ಯುವಕರು ಇದೀಗ ಬೆಂಗಳೂರಿನ ಹೃದಯಭಾಗ ವಸಂತನಗರದಲ್ಲಿ ‘ಚಾಯ್ ಪೀಡಿಯಾ’ ನೂತನ ಕೇಂದ್ರವನ್ನು ಆರಂಭಿಸಿದ್ದಾರೆ. ವಸಂತನಗರ ‘ಚಾಯ್ ಪೀಡಿಯಾ’ ಕೇಂದ್ರವನ್ನು ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಜಿ.ಎ.ಬಾವಾ, ಹಾಗೂ ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗೀಸ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪೊಲೀಸ್ ಅಧೀಕ್ಷಕರೂ ಆದ ಜಿ.ಎ.ಬಾವಾ, ಕೋವಿಡ್ ನಂತರದಲ್ಲಿ ಅನೇಕ ಯುವಕರು ಉದ್ಯೋಗ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇಂತಹಾ ಪರಿಸ್ಥಿತಿಯಲ್ಲಿ ಸರ್ಕಾರ ಹಾಗೂ ಎನ್‌ಜಿಒ ಗಳು ಉದ್ಯಮಶೀಲ ಯುವಜನರಿಗೆ ಪ್ರೋತ್ಸಾಹ ನೀಡುವಂತಾಗಬೇಕಿದೆ ಎಂದರು.
ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ಸಿಗಬೇಕು:
ರಾಜ್ಯದಲ್ಲಿ ಬಹುಪಾಲು ಜನ ಮಧ್ಯಮ ವರ್ಗದವರೇ ಇದ್ದಾರೆ. ಕೋವಿಡ್ ನಂತರದಲ್ಲಿ ಬಡ, ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿ ಶೋಚನೀಯವಾಗಿದ್ದು, ಇಂತಹಾ ಸ್ಥಿತಿಯಲ್ಲಿ ಕುಟುಂಬ ನಿರ್ವಹಿಸುವ ಯಜಮಾನಿಗೆ, ನಿರುದ್ಯೋಗಿ ಯುವಜನರಿಗೆ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ, ಯುವನಿಧಿ ಮುಂತಾದ ‘ಗ್ಯಾರೆಂಟಿ’ ಯೋಜನೆಗಳು ಸಹಕಾರಿಯಾಗಲಿದೆ ಎಂದು ಜಿ.ಎ.ಬಾವಾ ಹೇಳಿದರು.
“ಗ್ಯಾರೆಂಟಿ” ಜಾರಿ ಬಗ್ಗೆ ಗೊಂದಲ ಬೇಡ..
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವಾರವೂ ಆಗಿಲ್ಲ. ಆದರೂ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಯೋಜನೆ ಜಾರಿಯ ಪ್ರಕ್ರಿಯೆಗಳೂ ಆರಂಭವಾಗಿವೆ. ಆದರೂ ಪ್ರತಿಪಕ್ಷ ಬಿಜೆಪಿಯ ನಾಯಕರು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿರುವ ‘ಗ್ಯಾರೆಂಟಿ’ ಭರವಸೆಗಳನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಖಂಡಿತವಾಗಿಯೂ ಈಡೇರಿಸಲಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲ, ಬೇಡ ಎಂದು ಜಿ.ಎ.ಬಾವಾ ಭರವಸೆ ವ್ಯಕ್ತಪಡಿಸಿದರು.
‘ಚಾಯ್ ಪೀಡಿಯಾ’ ಬಗ್ಗೆ ಶಾಜಿ ವರ್ಗೀಸ್ ಶ್ಲಾಘನೆ:
ಸ್ವಾಭಿಮಾನಿ ಯುವಕರ ಸಮೂಹದ “ಚಾಯ್ ಪೀಡಿಯಾ’ ಪರಿಕಲ್ಪನೆ ಬಗ್ಗೆ ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷರೂ ಆದ ಹೈಕೋರ್ಟ್ ಹಿರಿಯ ವಕೀಲ ಶಾಜಿ ಟಿ ವರ್ಗೀಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉದ್ಯಮಶೀಲ ಯುವಜರನ್ನು ರೂಪಿಸುವ ಚಾಯ್ ಪೀಡಿಯಾ ತಂಡವನ್ನು ಅಭಿನಂಧಿಸಿದ ಶಾಜಿ ಟಿ.ವರ್ಗೀಸ್ ಅವರು, ಕೋವಿಡ್ ನಂತರದಲ್ಲಿ ಅನೇಕ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅವರು ಸ್ವ ಉದ್ಯೋಗ ನಡೆಸುವಙತಾಗಲು, ಆರ್ಥಿಕವಾಗಿ ಶಸಕ್ತರಾಗುವಂತಾಗಲು ಸರ್ಕಾರ ಸೂಕ್ತ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.
ಸರ್ಕಾರವು ‘ಗ್ಯಾರೆಂಟಿ’ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ. ಆದರೆ, ಇದು ಪರಿಪೂರ್ಣವಾಗಿ ಜಾರಿಯಾಗಬೇಕು, ಬಡವರ್ಗದವರ ಬದುಕಿಗೆ ಪೂರಕವಾಗಿರಬೇಕು. ಈ ಯೋಜನೆಗಳ ಜಾರಿಗೆ ಜನರೂ ಸೂಕ್ತ ರೀತಿಯಲ್ಲಿ ಸಹಕಾರವನ್ನೂ ನೀಡಬೇಕು ಎಂದು ಶಾಜಿ ಟಿ ವರ್ಗೀಸ್ ಅಭಿಪ್ರಾಯಪಟ್ಟರು.