ನವದೆಹಲಿ: ಸಾಲಮನ್ನಾ, ಕೃಷಿ ಬೆಲೆ ನಿಗದಿ ಸಹಿತ ವಿವಿಧ ಬೆಡಿಕೆಗಳನ್ನು ಮುಂದಿಟ್ಟು ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕೇಂದ್ರ ಸರ್ಕಾರಕ್ಕೆ ಸವಾಲಾಗಿದೆ. ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆದಿರುವಾಗಲೇ ಈ ಹೋರಾಟ ನಡೆದಿದ್ದು, ಪರಿಸ್ಥಿತಿ ನಿಭಾಯಿಸಲು ಸರ್ಕಾರ ಹರಸಾಹಸ ನಡೆಸುತ್ತಿದೆ.
ಇದೇ ಸಂದರ್ಭದಲ್ಲಿ ಭಾನುವಾರ ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವಿನ ಸಂಧಾನ ಸಭೆ ಗಮನಸೆಳೆಯಿತು. ಕೇಂದ್ರ ಸರ್ಕಾರದ ಜೊತೆ ರೈತ ಮುಖಂಡರ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಹೆಸರು ಕಾಳು ಉದ್ದು, ಉದ್ದಿನ ಬೇಳೆ, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳಿಗೆ ಎಂಎಸ್ಪಿ ಖಾತರಿ ಕಾನೂನು ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ರೈತರಿಗೆ ಮಂಡಿಸಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ರೈತರು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ (CCI) ಜೊತೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಬೇಕು. ಮೊದಲ ಹಂತದಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು, ರೈತರು ಇದನ್ನು ಒಪ್ಪಿದರೆ ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರದ ಪರವಾಗಿ ಸಚಿವ ಪಿಯುಷ್ ಗೂಯಲ್ ಅವರು ಈ ಸಭೆಯಲ್ಲಿ ಪ್ರಸ್ತಾಪ ಮುಂದಿಟ್ಟರು. ಕೇಂದ್ರ ಸರ್ಕಾರದ ಈ ಪ್ರಸ್ತಾವನೆ ಬಗ್ಗೆ ಇನ್ನೂರಕ್ಕೂ ಹೆಚ್ಚು ಸಂಘಟನೆಗಳ ಹಾಗೂ ಪರಿಣಿತರ ಜೊತೆ ಚರ್ಚೆ ಮಾಡಿ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರೂ ಆದ ಕುರುಬೂರ್ ಶಾಂತಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.