ಬೆಂಗಳೂರು: ರಾಜ್ಯದಿಂದ 19 ಮಂದಿ ಬಿಜೆಪಿ ಸಂಸದರನ್ನು ಸಂಸತ್ತಿಗೆ ಗೆಲ್ಲಿಸಿಕೊಟ್ಟ ರಾಜ್ಯದ ಜನರಿಗೆ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ..
ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಕರ್ನಾಟಕಕ್ಕೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ. ಬಿಜೆಪಿ ಹಾಗೂ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ನಯಾ ಪೈಸೆ ಕೊಡುಗೆ ನೀಡದಿದ್ದರೂ ದುರಾದೃಷ್ಟವಶಾತ್ 19 ಜನ ಸಂಸದರನ್ನು ನಮ್ಮ ಮತದಾರರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಇದು ನಮ್ಮ ಜನರ ದುರಾದೃಷ್ಟ ಎಂದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ಕರ್ನಾಟಕದ ಮೇಲೆ ಕನಿಷ್ಠ ಕೃತಜ್ಞತೆಯು ಅವರಿಗಿಲ್ಲ. ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾಗಿದ್ದೇನೆ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೇನೆ ಎನ್ನುವ ಪರಿಜ್ಞಾನವೇ ಇಲ್ಲ ಎಂದ ರಾಮಲಿಂಗ ರೆಡ್ಡಿ, ನಿರ್ಮಲ ಸೀತಾರಾಮನ್ ಅವರ ಪ್ರತಿ ಪರಕಾಲ ಪ್ರಭಾಕರ್ ಅವರು ಉತ್ತಮ ಅರ್ಥಶಾಸ್ತ್ರಜ್ಞರು. ಅವರೇ ನಿರ್ಮಲ ಸೀತಾರಾಮನ್ ಅವರ ಬಜೆಟ್ ಅನ್ನು ಟೀಕೆ ಮಾಡುತ್ತಾರೆ. ಜೊತೆಗೆ ಬಿಜೆಪಿಯ ಕಾರ್ಯವೈಖರಿ ಬಗ್ಗೆಯೂ ಇವರು ಟೀಕೆ ಮಾಡುತ್ತಿರುತ್ತಾರೆ. ಕಳೆದ 10 ವರ್ಷಗಳಲ್ಲಿ ಭಾರತ ದೇಶವನ್ನು ಬಿಜೆಪಿ 25 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದೆ ಎಂದು ಇದೆ ಹಣಕಾಸು ಸಚಿವೆಯ ಪತಿ ಪರಕಾಲ ಪ್ರಭಾಕರ್ ಅನೇಕ ಬಾರಿ ಹೇಳಿದ್ದಾರೆ ಎಂದು ಟೀಕಿಸಿದರು.
ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷದ ಹಿಂದೆ ನೀಡಿದ್ದ ಎಲ್ಲಾ ಭರವಸೆಗಳನ್ನು ಮರೆತು ಹೋಗಿದ್ದಾರೆ. ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಗಾಳಿ ಮತ್ತು ಬೆಳಕನ್ನು ಹೊರತುಪಡಿಸಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಲು ಅಕ್ಕಿ, ಯಾವುದನ್ನು ಬಿಡಲಿಲ್ಲ ಎಲ್ಲದಕ್ಕೂ ಜಿಎಸ್‌ಟಿಯನ್ನು ಹೇಳಿ ಜನಸಾಮಾನ್ಯರ ರಕ್ತ ಹೀರುತ್ತಿದ್ದಾರೆ ಎಂದು ರಾಮಲಿಂಗ ರೆಡ್ಡಿ ದೂರಿದರು.
ರಾಜ್ಯಗಳ ಮತ್ತು ದೇಶದ ಸಂಪತ್ತನ್ನು ಕೆಲವರಿಗೆ ಅದರಲ್ಲೂ ಅದಾನಿ ಅಂಬಾನಿ ಕಂಪನಿಗಳಿಗೆ ಲೂಟಿ ಮಾಡಲು ಸ್ವತಂತ್ರ ಕೊಟ್ಟಿದ್ದಾರೆ. ಗಣಿ ವಿಮಾನ ನಿಲ್ದಾಣ ರೈಲ್ವೆ ನಿಲ್ದಾಣ ರೈಲು ಜೊತೆಗೆ 25,000 ಕಿಲೋಮೀಟರ್ ನಷ್ಟು ಹೆದ್ದಾರಿಗಳನ್ನು ಖಾಸಗಿ ಅವರಿಗೆ ಬಿಜೆಪಿ ಸರ್ಕಾರ ಮಾರಿಕೊಂಡಿದೆ. 40,000 ಕಿಲೋಮೀಟರ್ ನಷ್ಟು ಉದ್ದದ ವಿದ್ಯುತ್ ಮಾರ್ಗಗಳನ್ನು ಖಾಸಗಿ ಅವರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದ ಅವರು, ನೆಹರು ಇಂದಿರಾಗಾಂಧಿ ರಾಜೀವ್ ಗಾಂಧಿ ಮನಮೋಹನ್ ಸಿಂಗ್ ಅವರು ಕಟ್ಟಿದ ಅನೇಕ ಸಾರ್ವಜನಿಕ ಉದ್ದಿಮೆಗಳನ್ನ ಬಿಜೆಪಿ ಒಂದೊಂದಾಗಿ ಮಾರುತ್ತಾ ಬಂದಿದೆ. ದೇಶದ ಆಸ್ತಿಗಳನ್ನ ಬಿಜೆಪಿ ಮಾರುತ್ತಿದೆ. ದೇಶವನ್ನೇ ಮಾರುತ್ತಿರುವ ಬಿಜೆಪಿಗೆ ಜನ ಏಕೆ ಬೆಂಬಲ ಕೊಡುತ್ತಾರೆ ಎನ್ನುವುದು ಅರ್ಥವೇ ಆಗುತ್ತಿಲ್ಲ ಎಂದರು.
ಈ ಬಾರಿಯ ಮಧ್ಯಂತರ ಬಜೆಟ್ ಅಲ್ಲಿ ದೇಶದ ಅನೇಕ ರಾಜ್ಯಗಳಿಗೆ ನಯಾಪೈಸೆ ಅನುದಾನ ಕೊಟ್ಟಿಲ್ಲ. ಕೇವಲ ಆಂಧ್ರ ಮತ್ತು ಬಿಹಾರ್ ರಾಜ್ಯಗಳಿಗೆ ಸರ್ಕಾರ ರಚಿಸಲು ಸಹಾಯ ಮಾಡಿದರು ಎನ್ನುವ ಕಾರಣಕ್ಕೆ ಭರಪೂರ ಕೊಡುಗೆಗಳನ್ನು ಕೊಡಲಾಗಿದೆ ಎಂದು ವಿಶ್ಲೇಷಿಸಿದ ರಾಮಲಿಂಗ ರೆಡ್ಡಿ, ಬಿಹಾರ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ 15 ಸ್ಥಾನಗಳನ್ನು ಗೆದ್ದಿದ್ದರೆ ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಈಗಲೂ ಸಹ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಆರ್ ಎಸ್ ಎಸ್ ಮತ್ತು ಬಿಜೆಪಿ ಮದ್ಯೆ ತಿಕ್ಕಾಟ ನಡೆಯುತ್ತಿದೆ. ಎಂದು ಕುರ್ಚಿಯಿಂದ ಮೋದಿಯವರನ್ನು ಇಳಿಸುತ್ತಾರೋ ಗೊತ್ತಿಲ್ಲ ಎಂದರು.
ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ದೇಶಕ್ಕೆ ಕಂಟಕ ತಪ್ಪಿದ್ದಲ್ಲ. ದೇಶದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಸಾಲವನ್ನು ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಮಾಡಿದೆ. 150 ಲಕ್ಷ ಕೋಟಿ ಹೊಸ ಸಾಲವನ್ನು ಬಿಜೆಪಿ ಸರ್ಕಾರ ಮಾಡಿದೆ. ನಮ್ಮನ್ನೆಲ್ಲ ಸಾಲಗಾರರನ್ನಾಗಿ ಮಾಡಿದ್ದೆ ಮೋದಿ ಮತ್ತು ಬಿಜೆಪಿ ಸರ್ಕಾರದ ಸಾಧನೆ ಎಂದರು. ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ದೇಶಕ್ಕೆ ಭವಿಷ್ಯವಿಲ್ಲ, ಯುವ ಜನರಿಗೆ ಉದ್ಯೋಗವಿಲ್ಲ. ಹೊಸ ಉದ್ದಿಮೆಗಳು ಸ್ಥಾಪನೆಯಾಗುತ್ತಿಲ್ಲ ಎಲ್ಲಿ ನೋಡಿದರೂ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಡತನ ರೇಖೆಗಿಂತ ಕೆಳಗೆ ಹೆಚ್ಚು ಜನ ಹೋಗುತ್ತಿದ್ದಾರೆ. ಮಾಧ್ಯಮಗಳಲ್ಲಿ ಮಾತ್ರ ಜನರು ಬಡತನ ರೇಖೆಗಿಂತ ಮೇಲಕ್ಕೆ ಹೋಗುತ್ತಿದ್ದಾರೆ ಎಂದರು.
ಬೆಂಗಳೂರಿನ ಸಬ್ ಅರ್ಬನ್ ರೈಲ್ವೆಗೆ 350 ಕೋಟಿ ಮೀಸಲಿಟ್ಟಿದ್ದಾರೆ ಇದುವರೆಗೂ ಒಂದು ರೂಪಾಯಿ ಕೊಟ್ಟಿಲ್ಲ. ಆದರೂ ಸಹ ಬೆಂಗಳೂರಿನ ಜನತೆ ನಾಲ್ಕು ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅದರಲ್ಲಿ ಒಬ್ಬರೂ ಮಾತನಾಡುವುದಿಲ್ಲ. ಬೆಂಗಳೂರಿನ ಜನ ಯಾರಿಗೆ ಮತ ಹಾಕಬೇಕು ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಆಯ್ಕೆಯಾದ ಸಂಸದರು ಏನಾದರೂ ಉಪಯುಕ್ತ ಕೆಲಸ ಮಾಡುತ್ತಿದ್ದಾರಾ ಎನ್ನುವುದನ್ನು ಅರಿಯಬೇಕು ಎಂದವರು ಬಿಜೆಪಿ ಸಂಸದರನ್ನೂ ತರಾಟೆಗೆ ತೆಗೆದುಕೊಂಡರು.