ಬೆಂಗಳೂರು: ಕಾವೇರಿ ನದಿಯ ನಮ್ಮ ಪಾಲಿನ ನೀರು ಹಾಗೂ ಸಮುದ್ರಕ್ಕೆ ಸೇರುತ್ತಿರುವ ಹೆಚ್ಚುವರಿ ನೀರನ್ನು ನಾವು ಬಹಳ ಜಾಗರೂಕತೆಯಿಂದ ಬಳಸಿಕೊಳ್ಳಬೇಕು. ಆ ಮೂಲಕ ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಕಾವೇರಿ ಕಣಿವೆಯ ಜಿಲ್ಲೆಗಳ ರೈತರಿಗೆ ನೆರವಾಗಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರು ಈಗಾಗಲೇ ಹೆಚ್ಚುವರಿ ನೀರಿನ ಬಳಕೆಗೆ ನಮ್ಮ ಅನುಮತಿ ಇಲ್ಲದೆ ಅನೇಕ ಯೋಜನೆ ಮಾಡಿದ್ದಾರೆ. ಈಗ 400 ಟಿಎಂಸಿಯಷ್ಟು ಹೆಚ್ಚುವರಿ ನೀರು ಸಮುದ್ರ ಪಾಲಾಗುತ್ತಿದೆ. ಈ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕಾನೂನಿನ ಹೊಸ ಹೋರಾಟ ಮಾಡಬೇಕಿದೆ ಎಂದಿದ್ದಾರೆ.
ಕಾವೇರಿ ನೀರಿನ ಹೋರಾಟ ಮುಗಿದಿಲ್ಲ, ಹೊಸ ಅಧ್ಯಾಯ ಆರಂಭಿಸಬೇಕಿದೆ. ಈ ವಿಚಾರವಾಗಿ ನಾನು ಅಧಿಕಾರಿಗಳ ಜತೆ ಇಂದು ಬೆಳಗ್ಗೆ ಚರ್ಚೆ ಮಾಡಿದ್ದು, ಕಾವೇರಿ ನೀರು ಸದ್ಬಳಕೆ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲಿ ಕಾರ್ಯಕ್ರಮ ಪ್ರಕಟಿಸಲಾಗುವುದು ಎಂದ ಅವರು, ಮೇಕೆದಾಟು ಯೋಜನೆ ವಿಚಾರವಾಗಿ ನಮ್ಮ ಹೋರಾಟದ ನಂತರ ರಾಜ್ಯ ಸರ್ಕಾರ 1 ಸಾವಿರ ಕೋಟಿ ಹಣವನ್ನು ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರದಿಂದ ಅದಕ್ಕೆ ಅನುಮತಿ ಪಡೆಯಲು ಆಗಲಿಲ್ಲ. ಈ ಯೋಜನೆಯಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೂ ಸರ್ಕಾರ ಈ ವಿಚಾರವಾಗಿ ಆಸಕ್ತಿ ತೋರುತ್ತಿಲ್ಲ. ಇದುವರೆಗೂ ಬಜೆಟ್ ನಲ್ಲಿ ಘೋಷಣೆ ಮಾಡಿದ ಹಣದಲ್ಲಿ ಒಂದು ರೂಪಾಯಿಯೂ ವೆಚ್ಚವಾಗಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ, ನಂತರ ಈ ಯೋಜನೆ ಜಾರಿಯಾಗಲಿದೆ ಎಂದುರು.
ಡಬಲ್ ಇಂಜಿನ್ ಬಿಜೆಪಿ ಸರ್ಕಾರ ರಾಜ್ಯದ ನೀರಾವರಿ ವಿಚಾರವಾಗಿ ಗಮನ ಹರಿಸುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ, ಮಹದಾಯಿ, ಮೇಕೆದಾಟು ಯೋಜನೆವರೆಗೂ ಯಾವುದರ ಬಗ್ಗೆಯೂ ಗಮನಹರಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ ಡಿಕೆಶಿ, ಬಿಜೆಪಿ ಸಂಸದರು ಒಬ್ಬರೂ ಧ್ವನಿ ಎತ್ತುತ್ತಿಲ್ಲ ಎಂಬ ಪ್ರಶ್ನೆಗೆ, ‘ ಬಿಜೆಪಿ ಸರ್ಕಾರದ ನಡೆಯಿಂದ ಆಗುತ್ತಿರುವ ಅವಮಾನಕ್ಕೆ ಬೇಸತ್ತು 8-10 ಸಂಸದರು ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಯಾರು ಎಂದು ಮುಂದೆ ಹೇಳುತ್ತೇನೆ ಎಂದರು.