ಮಂಗಳೂರು/ಉಡುಪಿ; ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಮತಸಮರ ಕ್ಲೈಮ್ಯಾಕ್ಸ್ ಘಟ್ಟದಲ್ಲಿದೆ. ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಮುನ್ನ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ರಾಜಕೀಯ ನಾಯಕರ ವಾಕ್ಸಮರ ಜೋರಾಗಿತ್ತು. ಅದರಲ್ಲೂ ಕಾವೇರಿ ನದಿ ನೀರು ವಿಚಾರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಬಿಜೆಪಿಯ ಅಣ್ಣಾಮಲೈ ಹಾಗೂ ಕಾಂಗ್ರೆಸ್‌ನ ಜಿ.ಎ.ಬಾವಾ ನಡುವಿನ ಹೇಳಿಕೆಗಳು ಗಮನಸೆಳೆಯಿತು.
ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ನಡುವೆ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳವರು ಅಣ್ಣ- ತಮ್ಮಂದಿರಂತೆ ಇದ್ದು, ರಾಜಕೀಯ ಬಿಟ್ಟು ಚಿಂತಿಸಬೇಕು’ ಎಂದು ಪ್ರತಿಪಾದಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿದೆ ಎಂದು ಅವರು ವಿಶ್ಲೇಷಿಸಿದರು. ಸುಪ್ರೀಂ ಕೋರ್ಟ್ ಆದೇಶ ಇದೆ, ನೀರು ಹಂಚಿಕೆ ಸೂತ್ರದ ಪ್ರಕಾರವೇ ನಡೆಯುತ್ತದೆ. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಎದಿರೇಟು:
ಅಣ್ಣಾಮಲೈ ಹೇಳಿಕೆ ಬಗ್ಗೆ ಕೆಂಡಾಮಂಡಲವಾಗಿರುವ ನಿವೃತ್ತ ಪೊಲೀಸ್ ಅಧೀಕ್ಷಕರೂ ಆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವಾ, ತಮಿಳುನಾಡಿನ ಬಿಜೆಪಿ ಅಧ್ತಕ್ಷರು ಕಾವೇರಿ ವಿಚಾರದಲ್ಲಿ ಮತ್ತೆ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.
ಕಾವೇರಿ ವಿಚಾರದಲ್ಲಿ ಉಭಯ ರಾಜ್ಯಗಳು ಅಣ್ಣತಮ್ಮಂದಿರಂತೆ ಇರಬೇಕಾದರೆ, ಕೇಂದ್ರದ ಜೊತೆ ಒತ್ತಡ ಹೇರಿ ಮೇಕೆದಾಟು ಯೋಜನೆಗೆ ಅವಕಾಶ ಕೊಡಿಸಲಿ ಎಂದು ಜಿ.ಎ.ಬಾವಾ ಹೇಳಿದರು. ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ವಿವಾದವನ್ನಹ ಸರಿಯಾದ ರೀತಿಯಲ್ಲಿ ಬಗೆಹರಿಸಿದ್ದಲ್ಲಿ ಬೆಂಗಳೂರು ಸಹಿತ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಜಿ.ಎ.ಬಾವಾ ಎದಿರೇಟು ನೀಡಿದರು.
ಕಾವೇರಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಿಗೆ ಆಸಕ್ತಿ ಇಲ್ಲ. ರಾಜ್ಯದ ಜನ ಆರಿಸಿ ಕಳುಹಿಸಿರುವ ಬಿಜೆಪಿ-ಜೆಡಿಎಸ್‌ನ 27 ಮಂದಿ ಸಂಸದರೂ ಕಾಳಜಿ ತೋರಿಲ್ಲ. ಹಾಗಾಗಿ ಮೇಕೆದಾಟು, ಕಾವೇರಿ, ಮಹಾದಾಯಿ ವಿಚಾರಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಜಿ.ಎ.ಬಾವಾ ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಏನೂ ಮಾಡಿಲ್ಲ ಎಂಬ ಅಣ್ಣಾಮಲೈ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿ.ಎ.ಬಾವಾ, ‘ನೀವು 9 ವರ್ಷ ಐಪಿಎಸ್ ಆದಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೀರಿ. ಅಂತಹಾ ಹುದ್ದೆಯನ್ನು ನೀವು ಅಲಂಕರಿಸಿದ್ದಿರೆಂದರೆ ಅದಕ್ಕೆ ಕಾಂಗ್ರೆಸ್ ರೂಪಿಸಿದ್ದ ವ್ಯವಸ್ಥೆಯಿಂದ ಸಾಧ್ಯವಾಗಿದೆ ಎಂದರು. ನೀವು ರಾಜಕೀಯ ಕಾರಣಕ್ಕಾಗಿ ಐಪಿಎಸ್ ಹುದ್ದೆ ತ್ಯಜಿಸಿದ್ದೀರಿ. ಇದೀಗ ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದು ರಾಜಕೀಯ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಜಿ.ಎ.ಬಾವಾ, ದೇಶದ ಬಗ್ಗೆ ಕಾನೂನು ಬಗ್ಗೆ ಮಾತನಾಡುತ್ತಿರುವ ನೀವು, ಪೊಲೀಸ್ ಅಧಿಕಾರಿಗಳ ಹತ್ಯೆ ಮಾಡಿರುವ ನರಹಂತಕ ವೀರಪ್ಪನ್ ಪುತ್ರಿಯನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಿಲ್ಲವೇ? IFS ಅಧಿಕಾರಿ ಶ್ರೀನಿವಾಸ್ ಎಂಬವರ ತಲೆ ಚೆಂಡಾಡಿದ ವೀರಪ್ಪನ್ ಪತ್ನಿ ಜೊತೆ ವೇದಿಕೆ ಹಂಚಿಕೊಂಡಿದ್ದೀರಿ ಅಲ್ಲವೇ? ಆಗ ದೇಶದ ಕಾನೂನು, ಪೊಲೀಸ್ ಇಲಾಖೆ ಮೇಲಿನ ಗೌರವದ ಬಗ್ಗೆ ನೆನಪಾಗಿಲ್ಲವೇ ಎಂದು ಅಣ್ಣಾಮಲೈ ಅವರನ್ನು ತರಾಟೆಗೆ ತೆಗೆದುಕೊಂಡರು.
ಈಗ ನೀವು ಸುಳ್ಳು ಯೂನಿವರ್ಸಿಟಿಯಲ್ಲಿ ಇದ್ದೀರಿ.
ಬಿಎಸ್‌ವೈ ಕುಟುಂಬದ ಪರವಾಗಿ ಮತಯಾಚಿಸಲು ನೀವು ಕರಾವಳಿಗೆ ಬಂದಿದ್ದೀರಿ. ಹಾಗೆಂದ ಮಾತ್ರಕ್ಕೆ, ಹಿಂದೆ ತಾವು ಎಸ್ಪಿಯಾಗಿ ಸಿಗುತ್ತಿದ್ದ ಗೌರವ ತಮಗೆ ಈಗ ಬಿಜೆಪಿ ಪಕ್ಷದ ಪ್ರತಿನಿಧಿಯಾಗಿ ಬಂದಿರುವ ಸಂದರ್ಭದಲ್ಲಿ ಕರಾವಳಿಯ ಜನರು ಸತ್ಕರಿಸುತ್ತಾರೆ ಎಂಬ ನಿರೀಕ್ಷೆ ಬೇಡ ಎಂದು ಜಿ.ಎ.ಬಾವಾ ತೀವ್ರ ತರಾಟೆಗೆ ತೆಗೆದುಕೊಂಡರು