ಬೆಂಗಳೂರು: ಕಳಂಕಿತರಿಗೆ ಸಚಿವ ಸ್ಥಾನ ಬೇಡ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು ಬಿಜೆಪಿ ವರಿಷ್ಠರಿಗೆ ಸಲಹೆ ಮಾಡಿದ್ದಾರೆ ಎನ್ನಲಾಗಿದ್ದು ಇದರಿಂದಾಗಿ ಬಹುತೇಕ ವಲಸಿಗ ಶಾಸಕರಲ್ಲಿ ಆತಂಕ ಮನೆ ಮಾಡಿದೆ.
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದು ಸದ್ಯದಲ್ಲೇ ಸಂಪುಟ ವಿಸ್ತರಿಸಲಿದ್ದಾರೆ. ಹಾಗಾಗಿ ಮಂತ್ರಿಗಿರಿಗಾಗಿ ಹಲವು ನಾಯಕರು ಭರ್ಜರಿ ಲಾಬಿ ನಡೆಸುತ್ತಿದ್ದಾರೆ. ಬಿಎಸ್ವೈ ಆಪ್ತರು ಹಾಗೂ ಕೆಲವು ವಲಸಿಗ ಶಾಸಕರಂತೂ ಸಿಎಂ ಜೊತೆಯಲ್ಲೇ ಸುತ್ತಾಡುತ್ತಾ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಈ ನಡುವೆಯೇ ಆರೆಸ್ಸೆಸ್ ಪ್ರಮುಖರಿಂದ ರವಾನೆಯಾಗಿದೆ ಎಂಬ ಸಂದೇಶ ಈ ಶಾಸಕರಲ್ಲಿ ಆತಂಕವನ್ನು ಸೃಷ್ಟಿಸಿದೆ.
ಕಳಂಕಿತರಿಗೆ ಹಾಗೂ ಮಾನಹಾನಿ ಆತಂಕದಲ್ಲಿರುವವರಿಗೆ ಮಂತ್ರಿಗಿರಿ ಬೇಡ ಎಂಬುದು ಸಂಘದ ಪ್ರಮುಖರ ಸಲಹೆ. ರಮೇಶ್ ಜಾರಕಿಹೊಳಿ ರೀತಿಯ ಪರಿಸ್ಥಿತಿ ಎದುರಾದರೆ ಮುಂಬರುವ ಚುನಾವಣೆ ವೇಳೆ ಪಕ್ಷ ಸಂಕಷ್ಟ ಎದುರಿಸಬಹುದು ಎಂಬುದು ಈ ಧುರೀಣರ ಅಭಿಪ್ರಾಯ.
ವಿಜಯೇಂದ್ರ, ನಿರಾಣಿ, ಆಪ್ತರ ಸಹಿತ ಹಲವರಲ್ಲಿ ಇದೀಗ ಆತಂಕ ಸೃಷ್ಠಿಯಾಗಿದೆ. ಭ್ರಷ್ಟಾಚಾರ ಆರೋಪ ಸುಳಿಯಲ್ಲಿ ಹಲವರು ಸಿಲುಕಿದ್ದರೆ, ‘ಸಿಡಿ ಗುಮ್ಮಾ’ ಹಿನ್ನೆಲೆಯಲ್ಲಿ ಸುಧಾಕರ್ ಸಹಿತ ಹಲವು ವಲಸಿಗರು ಕೋರ್ಟ್ ಮೊರೆ ಹೋಗಿದ್ದರು. ಈ ನಾಯಕರು ಇದೀಗ ಸಚಿವ ಸ್ಥಾನ ಹಾಗೂ ಪ್ರಮುಖ ಹುದ್ದೆಯಿಂದ ದೂರ ಉಳಿಯಬೇಕಾಗುತ್ತಾ ಎಂಬ ಭೀತಿಯ ಸುಳಿಯಲ್ಲಿ ಸಿಲುಕಿದ್ದಾರೆ.